ಪರಿಪೂರ್ಣ ನಟನಿಗೆ ಫಾಲ್ಕೆ ಪ್ರಶಸ್ತಿ ಗರಿ : ಪ್ರಧಾನಿ ಮೋದಿ ಅಭಿನಂದನೆ

ಮಂಗಳವಾರ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

ನವದೆಹಲಿ : ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್‌ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಸೆ.23ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್‌ಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಘೋಷಿಸಿದೆ.

ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್, ಮಲಯಾಳಂ ಮಾತ್ರವಲ್ಲದೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಭಾಜನರಾದ ಮಲಯಾಳಂ ಚಿತ್ರರಂಗದ ಎರಡನೇ ಕಲಾವಿದ ಮೋಹನ್ ಲಾಲ್. 2004ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ನೀಡಲಾಗಿತ್ತು. ಮೋಹನ್ ಲಾಲ್ ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.





















































 
 

2024ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಿಥುನ್ ಚಕ್ರವರ್ತಿ ಅವರಿಗೆ ನೀಡಿ ಗೌರವಿಸಲಾಗಿತ್ತು. 2019ರಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಲಾಗಿತ್ತು. ಇದೀಗ 2023ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣದ ಮತ್ತೊಬ್ಬ ಸೂಪರ್ ಸ್ಟಾರ್ ಆಗಿರುವ ಹಾಗೂ ಅತ್ಯದ್ಭುತ ನಟರಾಗಿರುವ ಮೋಹನ್ ಲಾಲ್ ಅವರಿಗೆ ಘೋಷಿಸಲಾಗಿದೆ. ಮೋಹನ್ ಲಾಲ್ ಅವರು ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಮೋಹನ್ ಲಾಲ್ ಅವರಿಗೆ ಶುಭಾಶಯ ಕೋರಿದ್ದಾರೆ.

ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಮೋಹನ್ ಲಾಲ್ ಅವರ ಸಿನಿಮೀಯ ಪ್ರಯಾಣವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದೆ.

ಮೋಹನ್ ಲಾಲ್ ಅವರು ಕಳೆದ 45 ವರ್ಷಗಳಿಂದಲೂ ಸಿನಿಮಾ ರಂಗದಲ್ಲಿದ್ದಾರೆ. ಆರಂಭದ ಸುಮಾರು 25 ಸಿನಿಮಾಗಳಲ್ಲಿ ಮೋಹನ್ ಲಾಲ್ ವಿಲನ್ ಪಾತ್ರಗಳಲ್ಲಿ ನಟಿಸಿದ್ದರು. ಮೋಹನ್ ಲಾಲ್ ವಿಲನ್ ಆಗಿ ಜನಪ್ರಿಯರಾದ ಬಳಿಕ 1984ರಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಗುವ ಮೂಲಕ ಮೋಹನ್‌ ಲಾಲ್ ನಾಯಕನಾಗಿಯೇ ಮುಂದುವರಿದರು. 1980ರಿಂದ ಈ ವರೆಗೆ ಮೋಹನ್ ಲಾಲ್ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ. 1986ರಲ್ಲಿ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸಿದ್ದರು. ಯಾವುದೇ ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡುವುದರಲ್ಲಿ ಸಿದ್ಧಹಸ್ತರಾಗಿರುವ ಮೋಹನ್‌ ಲಾಲ್‌ ದ ಕಂಪ್ಲೀಟ್‌ ಆಕ್ಟರ್‌ (ಪರಿಪೂರ್ಣ ನಟ) ಎಂದೂ ಅರಿಯಲ್ಪಡುತ್ತಾರೆ.

ಮೋಹನ್‌ ಲಾಲ್‌ಗೆ ಚಿತ್ರರಂಗದ ಅತ್ಯುನ್ನತ ಗೌರವವಾಗಿರುವ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಐದು ಸಲ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾಗಿರುವ ಲಾಲ್‌ಗೆ ಈ ಪ್ರಶಸ್ತಿ ಯಾವಾಗಲೋ ಸಿಗಬೇಕಿತ್ತು ಎನ್ನುವ ಅಭಿಪ್ರಾಯವಿದೆ. ಇಳಿಹರೆಯದಲ್ಲೂ ಬ್ಯುಸಿ ನಟರಾಗಿರುವ ಮೋಹನ್‌ ಲಾಲ್‌ ಇಡೀ ಭಾರತೀಯ ಚಿತ್ರರಂಗಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಅವರನ್ನು ಲೆಜೆಂಟ್‌ ನಟ ಎಂಬುದಾಗಿ ಕರೆಯುತ್ತಾರೆ.

error: Content is protected !!
Scroll to Top