ಚಿಂತನಾ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಶಿಸ್ತಿನ ಪಾಠ ಮಾಡಿದ ಸಂತೋಷ್
ಬೆಂಗಳೂರು: ಬಿಜೆಪಿ ಚಿಂತನಾ ಸಭೆಯ ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರಾಜ್ಯ ಬಿಜೆಪಿ ನಾಯಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಹಾಗೆಯೇ ನಾಯಕತ್ವ ಗುಣ ಬಗ್ಗೆಯೂ ಹೇಳಿದ್ದಾರೆ. ಪಕ್ಷದಲ್ಲಿ ಆಂತರಿಕ ಸ್ಫರ್ಧೆ ಇರಬೇಕು. ಅದು ಅಶಿಸ್ತಿನ ಹಂತಕ್ಕೆ ಹೋಗಬಾರದು. ಹಿಂದೆ ಎಲ್ಲ ಹಂತದಲ್ಲೂ ತಪ್ಪಾಗಿದೆ ಹೌದು. ಅದನ್ನು ಸರಿಪಡಿಸಿಕೊಂಡು ಹೋಗಬೇಕು. ಆರೋಪ ಬೇಡ. ಪಕ್ಷದಲ್ಲಿ ನಾಯಕರು ಮಾತನಾಡುವಾಗ ಪರಸ್ಪರ ನೇರವಾಗಿಯೇ ಮಾತಾಡಿ. ಮಧ್ಯವರ್ತಿಗಳನ್ನು ಇಟ್ಟುಕೊಂಡು ಮಾತನಾಡಬೇಕಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ಎಲ್ಲ ಸರ್ವೇಗಳಲ್ಲೂ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದಿವೆ. ನಾವು ಯಾವುದೇ ಹೋರಾಟ ಕೈಗೆತ್ತಿಕೊಂಡರೂ ಕಾಂಗ್ರೆಸ್ ಮತ್ತೊಂದು ವಿಚಾರ ಹುಡುಕಿ ವಿಷಯಾಂತರ ಮಾಡಿಬಿಡುತ್ತದೆ. ಧರ್ಮಸ್ಥಳ ವಿಚಾರದಲ್ಲಿ ಏನೂ ಇಲ್ಲ ಅಂತಾದಾಗ ಚಾಮುಂಡಿ ಬೆಟ್ಟ ವಿಚಾರ ತಂದರು. ನಾಯಕರು ಕಾರ್ಯಕರ್ತರ ಕೈಗೆ ಸಿಗುವಂತಿರಬೇಕು. ಪಕ್ಷದಲ್ಲಿ ಒಟ್ಟಾಗಿ ಹೋಗುವ ಕೆಲಸ ಆಗಬೇಕು. ಸ್ಪಷ್ಟತೆ ಇಲ್ಲದೆ ಯಾವುದೇ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಿದ್ದಾರೆ.
ಕಾರ್ಯಕರ್ತರ ಅಭಿಲಾಷೆ ಅರಿತು ಮುಂಚೂಣಿ ನಾಯಕರು ನಡೆದುಕೊಳ್ಳಬೇಕು. ನಾಯಕರ ಮಧ್ಯೆ ಒಗ್ಗಟ್ಟು, ಸಮನ್ವಯತೆಯ ಕೊರತೆ ಇದೆ ಎಂದು ಕಾರ್ಯಕರ್ತರಿಗೆ ಅನ್ನಿಸಿದರೆ ಅದು ಇದೆ ಅಂತಲೇ ಅರ್ಥ, ಅದನ್ನು ಸರಿಪಡಿಸಿಕೊಳ್ಳಿ. ರಾಜ್ಯ ಸರ್ಕಾರ ಜನಪ್ರಿಯತೆ ಕಳೆದುಕೊಂಡಿರುವ ಸದಾವಕಾಶ ಬಳಸಿಕೊಳ್ಳಿ. ತಳಮಟ್ಟದಿಂದ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಿ ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಗೆ ವ್ಯವಸ್ಥಿತ ತಯಾರಿ ಇರಲಿ ಎಂದು ಸಲಹೆ ನೀಡಿದರು.
ಮೊದಲು ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ. ನಂತರ ಬೇರೆಯವರಿಗೆ ಸಲಹೆ ಕೊಡುವ ಕೆಲಸ ಮಾಡಿ. 6 ತಿಂಗಳಿನಿಂದ ನೀವೇನು ಮಾತನಾಡಿದ್ದೀರಿ ಎಂಬುದನ್ನು ರಿವ್ಯೂ ಮಾಡಿಕೊಳ್ಳಿ. ಆಗ ನೀವೇನು ತಪ್ಪು ಮಾಡಿದ್ದೀರಿ ಎಂದು ನಿಮಗೆ ಗೊತ್ತಾಗುತ್ತದೆ. ಈಗ ರಾಜ್ಯದಲ್ಲಿ ಸರ್ವೆ ಮಾಡಿದರೆ ಕಾಂಗ್ರೆಸ್ 60 ಸ್ಥಾನದಲ್ಲಿ ಬರಬಹುದು. ಹಾಗಂತ ಗೆದ್ದುಬಿಡುತ್ತೀರಿ ಎಂದಲ್ಲ, ಕಾಂಗ್ರೆಸ್ ತಪ್ಪಿನಿಂದ ಗೆಲ್ಲುವಂತಾಗಬಾರದು. ಗೆಲುವಿಗೆ ನಿಮ್ಮ ಸಾಮರ್ಥ್ಯ ಏನು ಎಂಬುದು ಮುಖ್ಯ. ಚಿಂತನಾ ಸಭೆಯನ್ನು ಅಶೋಕ್ ಮತ್ತು ವಿಜಯೇಂದ್ರ ಯಶಸ್ವಿಯಾಗಿ ನಡೆಸಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಇಬ್ಬರಿಗೂ ಸಲಹೆ ನೀಡುತ್ತೇನೆ ಎಂದರು.
























