ಕಂಬಳಕ್ಕೆ ಸಿಗಲಿದೆ ರಾಜ್ಯದ ಕ್ರೀಡೆ ಎಂಬ ಅಧಿಕೃತ ಮಾನ್ಯತೆ

ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಗೆ ಹಿರಿದಾದ ಸ್ಥಾನಮಾನ

ಮಂಗಳೂರು: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಈ ಮೂಲಕ ಒಂದು ಕಾಲದಲ್ಲಿ ನಿಷೇಧದ ತೂಗುಕತ್ತಿಯಲ್ಲಿ ನೇತಾಡುತ್ತಿದ್ದ ಕಂಬಳ ಈಗ ರಾಜ್ಯದ ಅಧಿಕೃತ ಕ್ರೀಡೆ ಎಂಬ ಹಿರಿದಾದ ಮಾನ್ಯತೆ ಪಡೆದುಕೊಂಡು ಮೆರೆಯಲಿದೆ.

ಏನು ಲಾಭ?





















































 
 

ಕಂಬಳವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ರಾಜ್ಯ ಕ್ರೀಡೆಯಾಗಿ ಘೋಷಿಸಿದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಸಿಗಲಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಂಬಳಕ್ಕೆ ರಾಜ್ಯ ಕ್ರೀಡೆ ಮಾನ್ಯತೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಂಬಳಕ್ಕೆ ರಾಜ್ಯದ ಕ್ರೀಡೆಯಾಗಿ ಮಾನ್ಯತೆ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದೇ ವೇಳೆ ಕಂಬಳ ಅಸೋಸಿಯೇಶನ್‌ ನೇಮಕ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಿದೆ. ಕಂಬಳ ಸಮಿತಿ ಅಧ್ಯಕ್ಷರೇ ಕಂಬಳ ಅಸೋಸಿಯೇಶನ್‌ಗೆ ಅಧ್ಯಕ್ಷರಾಗಿದ್ದು, ಉಳಿದಂತೆ ಗೌರವ ಸಲಹೆಗಾರರು, ಸದಸ್ಯರು ಸೇರಿದಂತೆ 13 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಕಂಬಳ ಅಸೋಸಿಯೇಶನ್‌ ಸ್ಥಾಪನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ, ಓಟಗಾರರು, ಕೋಣದ ಮಾಲೀಕರು, ಇತರರಿಗೆ ಸೌಲಭ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಕಂಬಳ ಅಸೋಸಿಯೇಶನ್‌ಗೆ ಬೈಲಾ ಸಿದ್ಧಪಡಿಸುತ್ತಿದೆ.

ಕಂಬಳ ಕ್ರೀಡೆಗೆ ಫೆಡರೇಷನ್‌ ಇಲ್ಲದ ಕಾರಣ ಆ ಮಾನ್ಯತೆ ಪಡೆದುಕೊಳ್ಳಲು ಕೆಲವೊಂದು ತಾಂತ್ರಿಕ ಕಾರಣಗಳು ಅಡ್ಡಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಕಂಬಳ ಫೆಡರೇಶನ್‌ ಕೂಡ ರಚಿಸಲಾಗಿದ್ದು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಫೆಡರೇಶನ್‌ ಅಧ್ಯಕ್ಷರಾಗಿದ್ದಾರೆ. ಗೌರವಾಧ್ಯಕ್ಷರಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌, ಎಂಆರ್‌ಜಿ ಗ್ರೂಪ್‌ ಚೇರ್‌ಮೆನ್‌ ಪ್ರಕಾಶ್‌ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ದ.ಕ. ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಕಾಯಂ ಸದಸ್ಯರಾಗಿದ್ದು, ದ.ಕ. ಮತ್ತು ಉಡುಪಿ ಜಿಲ್ಲೆಯ ಸಂಸತ್‌ ಸದಸ್ಯರು ಸದಸ್ಯರಾಗಿರುತ್ತಾರೆ. ಹಿರಿಯ ಸದಸ್ಯರಾದ ಭಾಸ್ಕರ್‌ ಕೋಟ್ಯಾನ್‌, ಗುಣಪಾಲ ಕಡಂಬ, ರೋಹಿತ್‌ ಹೆಗ್ಡೆ ಎರ್ಮಾಳ್‌, ನವೀನ್‌ಚಂದ್ರ ಆಳ್ವ, ಪ್ರಶಾಂತ್‌ ಕಾಜವ, ಸುಕುಮಾರ್‌ ಶೆಟ್ಟಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಸರ್ಕಾರ ಉಡುಪಿ ಮತ್ತು ದಕ್ಷಿಣ ಕನ್ನಡ ಕಂಬಳಕ್ಕೆ ಒಟ್ಟು 40 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ 4 ಕಂಬಳಕ್ಕೆ 8 ಲಕ್ಷ ರೂ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 19 ಕಂಬಳಕ್ಕೆ 34 ಲಕ್ಷ ರೂ. ಅನುದಾನ ಹಂಚಿಕೊಳ್ಳಲು ಕಂಬಳ ಸಮಿತಿ ನಿರ್ಧರಿಸಿದ್ದು, ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

error: Content is protected !!
Scroll to Top