ಬೆಳ್ತಂಗಡಿ: ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಇರಿಸಿದ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಪೊಲೀಸರು ನೊಟೀಸ್ ಹಚ್ಚಿ ಬಂದಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ತಿಮರೋಡಿಯ ಮನೆಗೆ SIT ಅಧಿಕಾರಿಗಳು ದಾಳಿ ನಡೆಸಿದ್ದರು. ಈವೇಳೆ ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾಗಿತ್ತು. ಈ ಪ್ರಕರಣವನ್ನು SIT ಪೊಲೀಸರು ಬೆಳ್ತಂಗಡಿ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು. ಅದರಂತೆ ತಿಮರೋಡಿ ಮನೆಗೆ ಮಹಜರು ನಡೆಸುವ ಸಲುವಾಗಿ ಸೆ. 18 ರಂದು ಪೊಲೀಸರು ಹೋಗಿದ್ದು, ಈ ಸಮಯದಲ್ಲಿ ತಿಮರೋಡಿ ಮನೆಯಲ್ಲಿರಲಿಲ್ಲ.
ಆದರೆ ತಿಮರೋಡಿ ರಾತ್ರಿ ವೇಳೆ ಮನೆಗೆ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಬೆಳಗ್ಗೆ 6 ಗಂಟೆಗೆ ತಿಮರೋಡಿ ಮನೆಗೆ ಪೊಲೀಸರು ತೆರಳಿದ್ದಾರೆ. ಆದರೆ ಅದಾಗಲೇ ಅವರು ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಕಾರಣದಿಂದ ಸೆ. 21 ರಂದು ವಿಚಾರಣೆಗೆ ಹಾಜರಾಗುವಂತೆ ತಿಮರೋಡಿ ಅವರ ಮನೆಗೆ ನೊಟೀಸ್ ಹಚ್ಚಿ ಬಂದಿದ್ದಾರೆ.
























