ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಭಯೋತ್ಪಾದಕ ಯಾಸಿನ್ ಮಲಿಕ್ ಹೇಳಿಕೆ
ನವದೆಹಲಿ: ಜಾಗತಿಕ ಭಯೋತ್ಪಾದಕ ಲಷ್ಕರ್-ಎ-ತೈಬಾ ಸ್ಥಾಪಕ ಹಾಫಿದ್ ಸಯೀದ್‌ನನ್ನು ಪಾಕಿಸ್ತಾನದಲ್ಲಿ ಭೇಟಿ ಮಾಡಿ ಬಂದದ್ದಕ್ಕೆ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತನಗೆ ಧನ್ಯವಾದ ಹೇಳಿದ್ದರು ಎಂಬುದಾಗಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಹಾಗೂ ಉಗ್ರ ಯಾಸಿನ್ ಮಲಿಕ್ ಹೇಳಿರುವುದು ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
26/11 ದಾಳಿ ಸೇರಿದಂತೆ ಭಾರತದಲ್ಲಿ ಸಂಭವಿಸಿದ ಹಲವು ಭೀಕರ ಭಯೋತ್ಪಾದಕ ಕೃತ್ಯಗಳ ಮಾಸ್ಟರ್‌ಮೈಂಡ್ ಆಗಿರುವ ಹಾಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಅಂದಿನ ಪ್ರಧಾನಿ ಮನಮೋಹನ ಸಿಂಗ್ ವೈಯಕ್ತಿಕವಾಗಿ ತನಗೆ ಧನ್ಯವಾದ ಹೇಳಿದ್ದರು ಎಂದು ಭಯೋತ್ಪಾದಕ ಯಾಸಿನ್ ಮಲಿಕ್ ಹೇಳಿಕೊಂಡಿದ್ದಾನೆ.
ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ತಿಹಾರ್ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್‌ನ ಭಯೋತ್ಪಾದಕ ಯಾಸಿನ್ ಮಲಿಕ್ 2006ರಲ್ಲಿ ಪಾಕಿಸ್ತಾನದಲ್ಲಿ ಹಾಫಿಜ್ ಸಯೀದ್‌ನನ್ನು ಭೇಟಿಯಾಗಿದ್ದ.
ಹಫೀಜ್ ಸಯೀದ್ ಭೇಟಿಯ ಬಳಿಕ ಮನಮೋಹನ್ ಸಿಂಗ್ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಹೇಳಿದ್ದರು ಎಂದು ಯಾಸಿನ್ ಮಲಿಕ್ ಆಗಸ್ಟ್ 25ರಂದು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಈ ಭೇಟಿಯನ್ನು ನಾನು ನಿಗದಿ ಮಾಡಿರಲಿಲ್ಲ. ಬದಲಾಗಿ ಹಿರಿಯ ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ಉಗ್ರರ ಜೊತೆ ಸಭೆ ಮಾಡಿದ್ದೆ ಎಂದು ತಿಳಿಸಿದ್ದಾನೆ.
ಅಫಿಡವಿಟ್‌ನಲ್ಲಿದೆ ಮಾಹಿತಿ
2005ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಈ ಭೇಟಿಗೂ ಮೊದಲು ಆಗಿನ ಗುಪ್ತಚರ ದಳದ (ಐಬಿ) ವಿಶೇಷ ನಿರ್ದೇಶಕ ವಿ.ಕೆ. ಜೋಶಿ ಅವರು ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನ ರಾಜಕೀಯ ನಾಯಕರನ್ನು ಮಾತ್ರವಲ್ಲದೆ ಉಗ್ರ ಸಂಘಟನೆಗಳ ಜೊತೆ ಮಾತನಾಡಿ ಶಾಂತಿಗೆ ಸಹಕಾರ ನೀಡುವಂತೆ ಕೇಳಿಕೊಳ್ಳಬೇಕು ಎಂದು ಅವರು ನನ್ನ ಜೊತೆ ವಿನಂತಿ ಮಾಡಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರ ಶಾಂತಿ ಪ್ರಯತ್ನದ ಭಾಗವಾಗಿ ಈ ಕೆಲಸ ಮಾಡಬೇಕು ಎಂದು ಕೇಳಿಕೊಂಡಿದ್ದರು.
ಮಾತುಕತೆಯ ವೇಳೆ ಭಯೋತ್ಪಾದಕ ನಾಯಕರ ಜೊತೆ ಮಾತುಕತೆ ನಡೆಸದ ಹೊರತು ಶಾಂತಿ ಮಾತುಕತೆ ಪೂರ್ಣವಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ಸರ್ಕಾರದ ವಿನಂತಿಯ ಮೇರೆಗೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯೀದ್ ಮತ್ತು ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಇತರ ನಾಯಕರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದೆ.
ಉಗ್ರರ ಜೊತೆ ಸಭೆ ನಡೆಸಿ ನಾನು ಫೆಬ್ರವರಿ, 2006ರಲ್ಲಿ ಭಾರತಕ್ಕೆ ಮರಳಿದೆ. ಮರಳಿದ ಬಳಿಕ ಐಬಿ ವಿಶೇಷ ನಿರ್ದೇಶಕ ವಿ.ಕೆ ಜೋಶಿ ಅವರು ಮಾತುಕತೆಯ ಭಾಗವಾಗಿ ಹೋಟೆಲ್‌ನಲ್ಲಿ ನನ್ನನ್ನು ಭೇಟಿಯಾಗಿ ಪ್ರಧಾನಿಗೆ ತಕ್ಷಣ ವಿವರಿಸುವಂತೆ ವಿನಂತಿಸಿದರು. ಅಂದು ಸಂಜೆ ನಾನು ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರ ಸಮ್ಮುಖದಲ್ಲಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದೆ.
ಈ ಸಭೆಯಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ನಾನು ತೋರಿಸಿದ ಪ್ರಯತ್ನ, ತಾಳ್ಮೆ ಮತ್ತು ಸಮರ್ಪಣೆಗೆ ಸಿಂಗ್ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸಿದರು. ಮನಮೋಹನ್ ಸಿಂಗ್ ನನ್ನ ಕೈ ಕುಲುಕಿ ಕಾಶ್ಮೀರದಲ್ಲಿ ಅಹಿಂಸಾತ್ಮಕ ಚಳವಳಿಯ ಪಿತಾಮಹ ಎಂದು ನನ್ನನ್ನು ಕರೆದರು ಎಂದು ಅಫಡವಿಟ್‌ನಲ್ಲಿ ಮಲಿಕ್ ಹೇಳಿಕೊಂಡಿದ್ದಾನೆ.
ಮನೋಹನ್ ಸಿಂಗ್ ಮಾತ್ರವಲ್ಲ ಮಲಿಕ್ ತನ್ನ ಅಫಿಡವಿಟ್‌ನಲ್ಲಿ, ಅಟಲ್ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ, ಪಿ ಚಿದಂಬರಂ, ಐ.ಕೆ ಗುಜ್ರಾಲ್ ಮತ್ತು ರಾಜೇಶ್ ಪೈಲಟ್ ಸೇರಿದಂತೆ ಹಲವಾರು ಉನ್ನತ ರಾಜಕೀಯ ನಾಯಕರೊಂದಿಗಿನ ಮಾತುಕತೆಯ ಬಗ್ಗೆ ಉಲ್ಲೇಖಿಸಿದ್ದಾನೆ.
1990ರಲ್ಲಿ ನನ್ನ ಬಂಧನದ ನಂತರ, ವಿಪಿ ಸಿಂಗ್, ಚಂದ್ರಶೇಖರ್, ಪಿ.ವಿ ನರಸಿಂಹ ರಾವ್, ಎಚ್.ಡಿ ದೇವಗೌಡ, ಇಂದರ್ ಕುಮಾರ್ ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗಲೂ ನಾನು ಸರ್ಕಾರದ ಜೊತೆ ಮಾತನಾಡುತ್ತಿದ್ದೆ. ಅಧಿಕಾರದಲ್ಲಿರುವ ಸರ್ಕಾರಗಳಿಂದ ನಾನು ಸಹಾಯ ಪಡೆದುಕೊಂಡಿದ್ದೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುತ್ತಿದ್ದೆ ಎಂದಿದ್ದಾನೆ.
1990ರ ಜನವರಿಯಲ್ಲಿ ಶ್ರೀನಗರದಲ್ಲಿ ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಕೊಂದ ಆರೋಪ ಮಲಿಕ್ ಮೇಲಿದೆ. ಮಾಜಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣ, 1990ರಲ್ಲಿ ಕಾಶ್ಮೀರದಲ್ಲಿ ಪಂಡಿತರ ನರಮೇಧ ಮಾಡಿರುವ ಆರೋಪವೂ ಈತನ ಮೇಲಿದೆ.
ಆಗಸ್ಟ್ 11ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೇಳಿದೆ. ನ್ಯಾಯಾಲಯವು ಯಾಸಿನ್ ಮಲಿಕ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ ಪ್ರಕರಣವನ್ನು ನವೆಂಬರ್ 10ಕ್ಕೆ ಮುಂದೂಡಿದೆ. 2022 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಯಾಸಿನ್ ಮಲಿಕ್ ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳ ಜೊತೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಕೇಂದ್ರ ಸರ್ಕಾರ ಹೇಳಿದೆ.
























