ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ

ಹೇಗೆ ನಡೆಯಲಿದೆ ಸಮೀಕ್ಷೆ? ಏನೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಪೂರ್ಣ ವಿವರ

ಮಂಗಳೂರು: ರಾಜ್ಯ ಹಿಂದುಳಿದ ವರ್ಗಗ ಆಯೋಗದ ವತಿಯಿಂದ ಸೆ.22ರಿಂದ ಅ.7ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ನಡೆಯಲಿದೆ. ಇದಕ್ಕೆ ಈಗಾಗಲೇ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಮನೆ ಮನೆಗೆ ಹೋಗಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಸಮೀಕ್ಷೆ ಮಾಡುವುದು ಇದರ ಉದ್ದೇಶವಾಗಿದ್ದರೂ ಇದರ ಜೊತೆಗೆ ಕುಟುಂಬದ ಸಮಗ್ರ ಮಾಹಿತಿಯನ್ನು ನೀಡಬೇಕಾಗುತ್ತದೆ. ಸಮೀಕ್ಷೆಯ ಜಾತಿ ಕಾಲಂ ಈಗಾಗಲೇ ಸಾಕಷ್ಟು ವಿರೋಧಕ್ಕೆ ಗುರಿಯಾಗಿದೆ. ಅದಾಗ್ಯೂ ಸರ್ಕಾರ ತಾನು ನಿರ್ಧರಿಸಿದಂತೆ ಸಮೀಕ್ಷೆ ನಡೆಸಲು ಪಣತೊಟ್ಟಿದೆ.

ಈ ಸಮೀಕ್ಷೆ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಸ್ಪೀಕರ್‌ ಯು.ಟಿಖಾದರ್‌ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಸಮೀಕ್ಷೆಯ ಬಗ್ಗೆ ಚರ್ಚೆಗಳು ನಡೆದಿವೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಪಡಿತರ ಚೀಟಿ ಇಲ್ಲದ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಇಲ್ಲದ ಕುಟುಂಬದ ಸದಸ್ಯರಿಗೆ ಇ- ಕೆವೈಸಿ ಕಡ್ಡಾಯ. ಅದಕ್ಕಾಗಿ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದನ್ನು ಎಲ್ಲರೂ ಖಾತರಿಪಡಿಸಿಕೊಂಡಿರಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.





















































 
 

ನಿಗದಿತ ಸಮಯದಲ್ಲಿ ಸಮೀಕ್ಷೆ ನಡೆಸಲು ಆಯೋಗ ನಿರ್ಧರಿಸಿದೆ. ಸಮೀಕ್ಷೆ ಕುರಿತಂತೆ ಈಗಾಗಲೇ ಸ್ಟಿಕ್ಕರ್ ಅಂಟಿಸುವ ಮೂಲಕ ಮಾಹಿತಿ ನೀಡಲಾಗಿದೆ. ಮುಂದೆ ಸಮೀಕ್ಷೆಯ ಕುರಿತಂತೆ 60 ಪ್ರಶ್ನಾವಳಿಗಳನ್ನು ಒಳಗೊಂಡ ಫಾರಂ ಅನ್ನು ಪ್ರತಿ ಮನೆಗೆ ಆಶಾ ಕಾರ್ಯಕರ್ತರು ತಲುಪಿಸಲಿದ್ದಾರೆ. ಈ ಪ್ರಶ್ನಾವಳಿಗೆ ಪೂರಕವಾದ ಮಾಹಿತಿ ಯನ್ನು ಮನೆಯವರು ಸಿದ್ಧಪಡಿಸಿಕೊಂಡಿರಬೇಕು. ಬಳಿಕ ತರಬೇತು ಹೊಂದಿದ, ಆಯೋಗದಿಂದ ಅಧಿಕೃತ ಐಡಿ ಕಾರ್ಡ್ ಪಡೆದ ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಮೊಬೈಲ್‌ಗಳಲ್ಲಿಯೇ ಮನೆಯವರಿಂದ ಮಾಹಿತಿಯನ್ನು ಅಪ್‌ಲೋಡ್ ಮಾಡಿಕೊಳ್ಳುತ್ತಾರೆ.

ಈ ಸಂದರ್ಭ ಮನೆಯಲ್ಲಿ ಲಭ್ಯ ಇರುವವರು ಕುಟುಂಬದ ಸದಸ್ಯರ ಸಮಗ್ರ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು. ಈ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಮನೆಯೊಂದರ ಮಾಹಿತಿ ಸಂಗ್ರಹಿಸಲು ಗರಿಷ್ಠ 1 ಗಂಟೆಯ ಸಮಯಾವಕಾಶ ಬೇಕಿದೆ. ದಿನಕ್ಕೆ ಅವರು 10 ಮನೆಗಳಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಮಾಹಿತಿಗಳು ಸಿದ್ಧವಾಗಿದ್ದರೆ ಮಾಹಿತಿ ಭರ್ತಿ ಮಾಡಿಕೊಳ್ಳಲು ಸುಲಭವಾಗಲಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸಮೀಕ್ಷೆ ನಡೆಸುವ ಕುರಿತಂತೆ ಸಾರ್ವಜನಿಕರಿಗೆ ಸೂಕ್ತವಾದ ಮಾಹಿತಿಯನ್ನೇ ಒದಗಿಸದೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯ ನಡೆದಿದೆ. ಇದನ್ನು ಹರಿಯಬಾರದು ಎಂದು ಅದರಲ್ಲಿ ಹೇಳಿದ್ದರೂ ಅರಿವು ಇಲ್ಲದ ಅನೇಕ ಮನೆಗಳವರು ಹರಿದು ಬಿಸಾಡಿದ್ದಾರೆ. ಈ ಸಭೆಯ ಬಗ್ಗೆಯೂ ನಿನ್ನೆ ಮಾಹಿತಿ ನೀಡಲಾಗಿದೆ. ಸಮೀಕ್ಷೆ ಕುರಿತಂತೆಯೂ ಸಾಕಷ್ಟು ಗೊಂದಲಗಳು ಇರುವಾಗ ಸಾರ್ವಜನಿಕವಾಗಿ ಈ ಬಗ್ಗೆ ಮಾಹಿತಿ ನೀಡದೆ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಆಕ್ಷೇಪಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಉಪಜಾತಿಗಳನ್ನು ನಮೂದು ಮಾಡಲು ಅವಕಾಶ ಇರುವುದಿಲ್ಲ. ಕೇಂದ್ರ ಸರಕಾರದಿಂದ ಈಗಾಗಲೇ ಅಧಿಸೂಚಿತವಾಗಿರುವ ಎಸ್‌ಸಿ ಎಸ್‌ಟಿ ಜಾತಿಗಳಡಿಯಲ್ಲಿಯೇ ಸಂಬಂಧಪಟ್ಟ ಜಾತಿಗಳನ್ನು ನಮೂದು ಮಾಡಿಕೊಳ್ಳಬೇಕು.

ಸಮೀಕ್ಷೆಗೆ ಸಂದರ್ಭ ಇರಬೇಕಾದ ಮಾಹಿತಿ

*ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರಬೇಕು.

*ಒಂದು ಕುಟುಂಬದ 9 ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಒಂದು ಸಂಖ್ಯೆಗೆ ಲಿಂಕ್ ಮಾಡಬಹುದು.

*ಆಧಾರ್ ಕಾರ್ಡ್ ಸಂಖ್ಯೆಯನ್ನು ಆಧಾರ್ ನೋಂದಣಿ ಕೇಂದ್ರ, ಗ್ರಾಮ ಒನ್ ಕೇಂದ್ರ, ಮಂಗಳೂರು ಒನ್ ಕೇಂದ್ರ ಅಥವಾ ಅಂಚೆ ಕಚೇರಿಯಲ್ಲಿ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು.

*18 ವರ್ಷ ಮೇಲ್ಪಟ್ಟ ಎಲ್ಲರಿಗೆ ಮತದಾರರ ಗುರುತಿನ ಚೀಟಿ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಇದ್ದರೆ ತೆಗೆದಿಟ್ಟುಕೊಳ್ಳುವುದು.

*ಸಮೀಕ್ಷೆದಾರರು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಮನೆಗಳಿಗೆ ಭೇಟಿ ನೀಡಲಿದ್ದು, ಆ ಸಮಯ ಮನೆಯಲ್ಲಿರುವವರು ಕುಟುಂಬದ ಸದಸ್ಯರ ದಾಖಲೆಗಳು ಲಭ್ಯವಿರುವಂತೆ ನೋಡಿಕೊಳ್ಳುವುದು.

*ತರಬೇತಿ ಪಡೆದ ಶಿಕ್ಷಕರು ಸೆ.22ರಿಂದ ಅ.7ರ ನಡುವೆ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಬಿಟ್ಟು ಹೋದವರ ಮಾಹಿತಿಯನ್ನು ಕುಟುಂಬದ ಇತರ ಸದಸ್ಯರಿಂದ ಪಡೆಯಲಾದ ಮೊಬೈಲ್ ಸಂಖ್ಯೆಯ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿಯೂ ಬಿಟ್ಟು ಹೋದ ಮಾಹಿತಿಯನ್ನು ಬಳಿಕ ಗ್ರಾ.ಪಂ ಮಟ್ಟದಲ್ಲಿ ಶಿಬಿರಗಳ ಮೂಲಕ ಸಂಗ್ರಹಿಸಲಾಗುತ್ತದೆ. ಸಮುದಾಯಗಳಲ್ಲಿ ಯಾವುದೇ ರೀತಿಯ ಗೊಂದಲ, ಆಕ್ಷೇಪ, ಮಾಹಿತಿ, ಸಲಹೆಗಳಿದ್ದಲ್ಲಿ ಆಯೋಗಕ್ಕೆ ಲಿಖಿತವಾಗಿ ಸಲ್ಲಿಸಬಹುದು. ಸಹಾಯವಾಣಿ ಸಂ. 8050770004 ಅಥವಾ ವೆಬ್‌ಸೈಟ್ kscbc.karnataka.gov.in| ಮೂಲಕವೂ ಸಂಪರ್ಕಿಸಬಹುದು.

error: Content is protected !!
Scroll to Top