ತಾಲೂಕು ಮಟ್ಟದ ಸ್ವಚ್ಛತಾ ಹೀ ಸೇವಾ- ಸ್ವಚ್ಛತೆಯೇ ಸೇವೆ -2025 ಪಾಕ್ಷಿಕಕ್ಕೆ ಚಾಲನೆ | ಕಸ ಎಸೆಯುವವರ ವಿರುದ್ಧ ದಂಡ‌‌ ಪ್ರಯೋಗ: ವಿಷ್ಣು ಪ್ರಸಾದ್

ಸ್ವಚ್ಛತೆ ಎಂದಾಕ್ಷಣ ಪ್ರತೀ ಬಾರಿ ಗ್ರಾಮ ಪಂಚಾಯತ್ ನಿಂದ ರಸ್ತೆ ಬದಿ ಅಥವಾ ಸುತ್ತಮುತ್ತಲಿನ ವಾತಾವರಣದಲ್ಲಿ ಬಿದ್ದಿರುವ‌ ಕಸ ಶುಚಿಗೊಳಿಸುವುದು ಒಂದೇ ಅಲ್ಲ. ಬದಲಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡುವಂತಾಗಬೇಕು. ಅದಕ್ಕೆ ಪ್ರಸ್ತುತ ಕಸ ಸುರಿಯುವವರಿಗೆ ದಂಡ ವಿಧಿಸುವ ಮೂಲಕ ಕಾನೂನುಕ್ರಮ ಜರಗಿಸುವುದು ಒಂದೇ ಮಾರ್ಗ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗ್ರಾ.ಪಂ. ನೋಡಲ್ ಅಧಿಕಾರಿ ವಿಷ್ಣು ಪ್ರಸಾದ್ ಅಭಿಪ್ರಾಯಪಟ್ಟರು.

ಅವರು ಸೆ. 17 ರಂದು ಸ್ವಚ್ಛ ಭಾರತ ಮಿಷನ್ ಗ್ರಾಮೀಣ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತಿ ನರಿಮೊಗ್ರು ಇದರ ಸಹಯೋಗದಲ್ಲಿ ಸೆ.17 ರಿಂದ ಅ.2 ರವರೆಗೆ ನಡೆಯುವ “ಸ್ವಚ್ಛತಾ ಹೀ ಸೇವಾ- ಸ್ವಚ್ಛತೆಯೇ ಸೇವೆ -2025” ಪಾಕ್ಷಿಕದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆಯ ಬಗ್ಗೆ ಅರಿವು ಎಲ್ಲರಲ್ಲೂ ಮೂಡಬೇಕು. ಅದಕ್ಕೆ ಹಲವು ಬಾರಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡರೂ ಸಮಾಜದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು. ನಿರ್ಜನ ಪ್ರದೇಶದಲ್ಲಿ ಕಸ ಸುರಿಯುವುದು ನಡೆಯುತ್ತಲೇ‌ ಇದೆ. ಇಂತಹ ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಮೂಲಕ ದಂಡ ವಿಧಿಸುವ ಕೆಲಸಗಳನ್ನು ಗ್ರಾಮ ಪಂಚಾಯತ್ ನಡೆಸಬೇಕು ಇದಕ್ಕೆ ಗ್ರಾ.ಪಂ‌. ಸದಸ್ಯರು ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಮಾತನಾಡಿ, ಕಳೆದ ಬಾರಿ 10 ದಿನಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಿ ಕೆಲವು ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ ಇದರಿಂದ ಸ್ವಲ್ಪಮಟ್ಟಿಗೆ ಕಸ ಎಸೆಯುವುದು ಕಡಿಮೆಯಾಗಿದೆ. ಆದರೆ‌ ಇನ್ನೂ ಕಸ ಎಸೆಯುವುದು ಕಂಡು ಬಂದರೆ‌ ಕಾನೂನು ಕ್ರಮ ಜರಗಿಸಲಾಗುವುದು ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಕಸ ಮುಕ್ತ ಗ್ರಾಮವನ್ನಾಗಿಸುವ ಆಶಯ ನಮ್ಮದು ಎಂದು ಹೇಳಿದರು.





















































 
 

ಈ ಸಂದರ್ಭ ಗ್ರಾ.ಪಂ.ಸದಸ್ಯರಾದ ನವೀನ್ ರೈ, ತಾರಾನಾಥ, ಪದ್ಮಪ್ಪ, ಪ್ರತಿಮ ರೈ, ಮಲ್ಲಿಕಾ ರೈ, ಸುಧೀರ್ ಕುಮಾರ್, ಪದ್ಮಾವತಿ, ವಸಂತಿ, ಪುಷ್ಪಾವತಿ, ತಾಲೂಕು ಪಂಚಾಯತ್ ವಿಷಯ ನಿರ್ವಾಹಕರಾದ ಸುರೇಶ್, ರಮೇಶ್, ತುಳಸಿ, ಎನ್ ಆರ್ ಎಲ್ ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಐಇಸಿ ಸಂಯೋಜಕ ಭರತ್ ರಾಜ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮ, ಉಪಾಧ್ಯಕ್ಷೆ ಸೌಮ್ಯ, ಪದಾಧಿಕಾರಿಗಳು, ಎಂ‌ ಬಿ ಕೆ ಅನುರಾಧ ಪ್ರಭು, ಸ್ವಚ್ಛತಾ ಸಿಬ್ಬಂದಿಗಳು, ಗ್ರಾ.ಪಂ. ಸಿಬ್ಬಂದಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು. ಸೆ.17 ರಿಂದ‌ ಅ.2 ರ ವರೆಗೆ ಹಮ್ಮಿಕೊಳ್ಳುವ ವಿವಿಧ ಸ್ವಚ್ಛತಾ ಕಾರ್ಯಕ್ರಮದ ವೇಳಪಟ್ಟಿಯನ್ನು ತಯಾರಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು‌. ಪ್ರಾಸ್ತಾವಿಕವಾಗಿ‌ ಮಾತನಾಡಿ, ಸ್ವಚ್ಛತೆಯ ನಮ್ಮೆಲ್ಲರ ಜವಾಬ್ದಾರಿ, ಈಗಾಗಲೇ ಗ್ರಾಮದ ಪ್ರತಿ ಮನೆಯಿಂದ ಸಂಜೀವಿನಿ ಒಕ್ಕೂಟದ ಮಹಿಳೆಯರು ಒಣ ಕಸ ಸಂಗ್ರಹಿಸುತ್ತಿದ್ದಾರೆ. ಗ್ರಾಮಸ್ಥರು ಎಲ್ಲೆಂದರಲ್ಲಿ ಕಸ ಎಸೆಯದೆ ಪ್ಲಾಸ್ಟಿಕ್ ಇನ್ನಿತರ ಒಣ ಕಸವನ್ನು ನೇರವಾಗಿ ಸ್ವಚ್ಛ ವಾಹಿನಿಗೆ ನೀಡಬೇಕು‌ ಎಂದರು ಹಾಗೂ ಈ ಸ್ವಚ್ಛತಾ ಪಾಕ್ಷಿಕಕ್ಕೆ ಎಲ್ಲರೂ ಸಹಕರಿಸುವಂತೆ ಕೋರಿದರು.

error: Content is protected !!
Scroll to Top