ಮಿನಿ ವಿಧಾನಸೌಧದ ಎದುರು ಬೆಳಗ್ಗಿನಿಂದ ಸಂಜೆ ತನಕ ಧರಣಿ
ಮಂಗಳೂರು : ಕೆಂಪುಕಲ್ಲು ಮತ್ತು ಮರಳಿನ ಕೊರತೆ ನಿವಾರಿಸಲು ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದೆ ಜನಸಾಮಾನ್ಯರ ಬದುಕು ಹೈರಾಣವಾಗುವಂತೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ಮಂಗಳೂರಿನಲ್ಲಿ ನಡೆಯಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳಿನ ತೀವ್ರ ಕೊರತೆ ಉಂಟಾಗಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬಡವರ ಮನೆ ಕಟ್ಟುವ ಕನಸು ನುಚ್ಚುನೂರಾಗಿದೆ. ಕಟ್ಟಡ ಕಾರ್ಮಿಕರು, ಗುತ್ತಿಗೆದಾರು ಕೆಲಸವಿಲ್ಲದ ನಿರುದ್ಯೋಗಿಗಳಾಗಿದ್ದಾರೆ. ಈ ಗಂಭೀರ ಸಮಸ್ಯೆಗೆ ಇನ್ನೂ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯದಿರುವುದನ್ನು ಖಂಡಿಸಿ ಸೆ.16 ರಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಧರಣಿ ನಡೆಯಲಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಲಕ್ಷ್ಯ ಹಾಗೂ ನಿರ್ಲಜ್ಜ ಧೋರಣೆಯಿಂದ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬದ ಬದುಕು ಬೀದಿಗೆ ಬಿದ್ದಿದೆ. ಕಟ್ಟಡ ನಿರ್ಮಾಣ ವಲಯದಲ್ಲಿ ನೂರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ. ಕೆಂಪುಕಲ್ಲು ಗಣಿಗಾರಿಕೆಗೆ ಇಲ್ಲಸಲ್ಲದ ನಿರ್ಬಂಧ ಹೇರಿ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಕಾಂಗ್ರೆಸ್ ಸರ್ಕಾರ ಕಳೆದ ಮೂರು ತಿಂಗಳಿಂದ ಬರೀ ಪೊಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಕ್ಯಾ.ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಬಿಜೆಪಿ ನಾಯಕರು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಸರ್ಕಾರದ ಜನವಿರೋಧಿ ನಿರ್ಧಾರಗಳಿಂದ ಬಾಧಿತರಾಗಿರುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಕ್ಯಾ. ಚೌಟ ಕರೆ ನೀಡಿದ್ದಾರೆ.
























