ದಸರಾ ಉದ್ಘಾಟನೆ ವಿವಾದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಮಾತಿನ ಫೈಟ್
ಬೆಂಗಳೂರು: ದಸರಾ ಹಬ್ಬವನ್ನು ಉದ್ಘಾಟಿಸಲು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಆಯ್ಕೆಯನ್ನು ಪ್ರಶ್ನಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವೆ ಮತ್ತೊಂದು ಸುತ್ತಿನ ವಾಗ್ಯುದ್ಧ ಪ್ರಾರಂಭವಾಗಿದೆ. ಪ್ರತಾಪ್ ಸಿಂಹ ಅವರನ್ನು ಸಿದ್ದರಾಮಯ್ಯ ನಿನ್ನೆ ಮೂರ್ಖ ಎಂದು ಕರೆದಿದ್ದು, ಇದಕ್ಕೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ 14 ಸೈಟ್ ನುಂಗಿದ ನೀವು ನನಗೆ ಬುದ್ಧಿ ಹೇಳಲು ಬರುವುದು ಬೇಡ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ ಏನು ಬೇಕಾದರೂ ನನ್ನನ್ನು ಕರೆಯಲಿ. ಅವರಿಗೂ ಸೋಷಿಯಲ್ ಮೀಡಿಯಾದಲ್ಲಿ ಏನೇನು ಕರೆಯುತ್ತಾರೆ ಎನ್ನುವುದನ್ನು ನೋಡಲಿ. ಅದನ್ನು ನೋಡಿದರೆ ಅವರು ಮುಖ ಮುಚ್ಚಿಕೊಂಡು ಓಡಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ತನ್ನ ಅರ್ಜಿ ವಜಾಗೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೋರ್ಟ್ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಜಾತ್ಯಾತೀತತೆಯ ಚೌಕಟ್ಟಿನ ಅಡಿಯಲ್ಲಿ ಪಿಐಎಲ್ ವಜಾ ಆಗಿದೆ. ಅದೇ ವಾಕ್ ಸ್ವಾತಂತ್ರ‍್ಯ ಬಳಸಿಕೊಂಡು ಮಾತನಾಡುತ್ತಿದ್ದೇನೆ ಅಷ್ಟೇ ಎಂದರು.
ಬಾನು ಮುಷ್ತಾಕ್ ಭುವನೇಶ್ವರಿ ಬಗ್ಗೆ, ಅರಿಶಿನ ಕುಂಕುಮ ಹೇಳಿಕೆ ಬಗ್ಗೆ ಕನಿಷ್ಠ ಕ್ಷಮೆಯನ್ನೂ ಕೋರಿಲ್ಲ. ಅದಕ್ಕಾಗಿ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ. ಭಾರತದ ಮೂಲ ಸಂಸ್ಕೃತಿಗೆ ಇದೇ ರೀತಿ ಅಪಮಾನ, ಧಕ್ಕೆ ಆಗೋದನ್ನೂ ಹೀಗೆ ಸಹಿಸಿಕೊಳ್ತೀರಾ? ದಾರ್ಷ್ಟ್ಯ, ದ್ವೇಷದಿಂದ ಈ ರೀತಿ ಹೇಳಿಕೆಗಳನ್ನು ಕೊಡೋವುದಾದರೆ ಪರಿಸ್ಥಿತಿ ಏನಾಗಬೇಕು? ಸೆಕ್ಯುಲರ್ ಪರಿಧಿಯಲ್ಲಿ ನೋಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮುಡಾದಲ್ಲಿ 14 ಸೈಟ್‌ಗಳನ್ನು ಪಡೆದಿದ್ದು ಹಗಲು ದರೋಡೆ ಆಗಿತ್ತು. ಇಂಥ ಹಗಲು ದರೋಡೆ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ವಜಾ ಮಾಡಲಾಯಿತು. ಹಾಗೇ ಧರ್ಮಸ್ಥಳ ಮೇಲೆ ಅಪನಂಬಿಕೆ ಬರುವಂಥ ವಿಡಿಯೋ ಸಮೀರ್ ಮಾಡಿದ್ದ. ಇಷ್ಟೆಲ್ಲ ಕೆಲಸ ಮಾಡಿದ ಸಮೀರ್‌ಗೆ ಸೆಷನ್ಸ್ ಕೋರ್ಟ್ ಜಾನೀನು ನೀಡಿತು. ಮಹೇಶ್ ತಿಮರೋಡಿ ಕೂಡ ಆರಾಮವಾಗಿ ಓಡಾಡಿಕೊಂಡಿದ್ದಾನೆ ಎಂದರು.
ಪ್ರದೀಪ್ ಈಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗುದ್ದಾಡಿದರೆ ಗಂಧದ ಜೊತೆ ಗುದ್ದಾಟ ಮಾಡಬೇಕು. ಹಂದಿ ಜೊತೆ, ಕೂಗುಮಾರಿಗಳ ಜತೆ ಗುದ್ದಾಟ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.
























