ಪಂದ್ಯದಲ್ಲಿ ಅವಮಾನ : ಭಾರತ ವಿರುದ್ಧ ಪಾಕ್‌ ದೂರು

ಹ್ಯಾಂಡ್‌ ಶೇಕ್‌ ನೀಡದೆ ಶಿಷ್ಟಾಚಾರ ಉಲ್ಲಂಘನೆ ಎಂಬ ಆರೋಪ

ದುಬೈ: ಇಲ್ಲಿ ನಡೆದ ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಅವಮಾನ ಒಂದೆಡೆಯಾದರೆ, ಅದಕ್ಕೂ ಮಿಗಿಲಾಗಿ ಭಾರತದ ಆಟಗಾರರು ಪಹಲ್ಗಾಮ್‌ ಉಗ್ರ ದಾಳಿ ಹಾಗೂ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎದುರಾಳಿ ತಂಡದ ಸಹ ಆಟಗಾರರು ಎಂಬ ಕನಿಷ್ಠ ಗೌರವವನ್ನು ನೀಡದೆ ನಡೆಸಿಕೊಂಡ ರೀತಿಯಿಂದ ಇನ್ನಿಲ್ಲದ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ತಂಡ ಈಗ ತನಗೆ ಸೂಕ್ತ ಗೌರವ ನೀಡಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಭಾರತದ ವಿರುದ್ಧ ದೂರು ನೀಡಿದೆ.

ಟಾಸ್ ಹಾಕುವ ಸಮಯದಲ್ಲಿ ಮತ್ತು ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕ್‌ ತಂಡದ ನಾಯಕ ಸಲ್ಮಾನ್ ಆಘಾ ಅವರನ್ನು ನಿರ್ಲಕ್ಷಿಸಿ, ಹ್ಯಾಂಡ್‌ಶೇಖ್‌ ಸಹ ಮಾಡಲಿಲ್ಲ. ಇಡೀ ಪಂದ್ಯದಲ್ಲಿ ಟೀಂ ಇಂಡಿಯಾದ ಎಲ್ಲ ಆಟಗಾರರು ಪಾಕ್‌ ಆಟಗಾರರತ್ತ ಬಿಗು ನಿಲುವು ತಳೆದಿದ್ದರು. ಈ ವಿಚಾರ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.





















































 
 

ಟೀಂ ಇಂಡಿಯಾ ನಾಯಕನ ದಿಟ್ಟತನದಿಂದ ಮುಜುಗರಕ್ಕೊಳಗಾದ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಅಖ್ತರ್ ಚೀಮಾ, ಭಾರತೀಯ ತಂಡದ ವಿರುದ್ಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಮ್ಯಾಚ್ ರೆಫರಿಯ ವರ್ತನೆಯ ವಿರುದ್ಧ ಮ್ಯಾನೇಜರ್ ಚೀಮಾ ಅಧಿಕೃತ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಪಂದ್ಯದ ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಈ ಗೆಲುವು ‘ದೇಶಕ್ಕೆ ಸಲ್ಲಿಸಿದ ದೊಡ್ಡ ಉಡುಗೊರೆ’ ಎಂದಿದ್ದರು. ಈ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ ಮತ್ತು ಇಂದಿನ ಗೆಲುವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ ಎಂದಿದ್ದರು.

error: Content is protected !!
Scroll to Top