ಸುಳ್ಯ: ಸುಳ್ಯದ ಎಲಿಮಲೆಯ ಲಾರಿ ಮಾಲಕ ಭಾನುಪ್ರಕಾಶ್ ಸರಕಾರದ ನಿಯಮದಿಂದ ಕೆಂಪು ಕಲ್ಲು ನಿಷೇಧದಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ, ಫೈನಾನ್ಸ್ ಸಂಸ್ಥೆಯವರಿಂದ ಕಿರುಕುಳವಾಯಿತು ಎಂಬ ಆರೋಪದ ಮೇಲೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಇಂದು ಅರುಣ್ ಪುತ್ತಿಲ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಭಾನುಪ್ರಕಾಶ್ ರನ್ನು ಭೇಟಿಯಾದ ಪುತ್ತಿಲ ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರೇಸ್ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರ ಮರಣಶಾಸನ ಬರೆಯುತ್ತಿದೆ ಎಂದು ಆರೋಪಿಸಿದರು.
ಜಲ್ಲಿ ಕಲ್ಲು ಮರಳು ನಿಷೇಧದಿಂದ ಕೂಲಿ ಕಾರ್ಮಿಕರ ಬದುಕು ರಸ್ತೆಗೆ ಬಂದರೂ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗೊಡವೆಯೇ ಇಲ್ಲದಂತೆ ಇದ್ದಾರೆ ಎಂದರು.
ಧಾರ್ಮಿಕ ವಿಚಾರಕ್ಕೆ ನಿಷೇಧ ಹೇರಿದ ಸರ್ಕಾರ ಇದೀಗ ಬಡ ಜನರ ಬದುಕಿನ ಮೇಲೂ ದಾಳಿ ಮಾಡುತ್ತಿದೆ. ತಕ್ಷಣ ಎಚ್ಚೆತ್ತು ನಿಷೇಧವನ್ನು ಕಾನೂನು ರೀತಿ ತೆರವುಗೊಳಿಸಿ ಇಲ್ಲವಾದರೆ ಜನರ ಆಕ್ರೋಶವನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿದರು.
ಭಾನುಪ್ರಕಾಶ್ ಅವರು ಸಾಲದ ವಿವರ ಮತ್ತು ಫೈನಾನ್ಸ್ ಸಂಸ್ಥೆಯ ಕಿರುಕುಳದ ಬಗ್ಗೆ ಚೀಟಿ ಬರೆದಿಟ್ಟಿದ್ದು, ಆ ಫೈನಾನ್ಸ್ ಕಂಪನಿಯವರ ವಿರುದ್ಧ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದರು.
ಭಾನುಪ್ರಕಾಶ್ ಅವರ ಪತ್ನಿ ಹಾಗೂ ಮೂವರು ಮಕ್ಕಳು ಜೀವನದಲ್ಲಿ ದೃತಿಗೆಡದೆ ಮುಂದಡಿ ಇಡಬೇಕು. ನಾವು ನಿಮ್ಮ ಜೊತೆಗಿದ್ದೇವೆ ಎಂದು ಅರುಣ್ ಪುತ್ತಿಲ ಹೇಳಿದರು.
ಈ ಸಂದರ್ಭ ದಿನೇಶ್ ಕೆ ಅಡ್ಕಾರ್, ಸುಧಾಕರ ಬಾಟೋಳಿಮೂಲೆ, ಮಹೇಶ್ ಉಗ್ರಾಣಿಮನೆ, ಉಮೇಶ್ ಕೋಡಿಬೈಲು ಸಹಿತ ಹಲವರು ಉಪಸ್ಥಿತರಿದ್ದರು.
























