ಕತಾರ್‌ : ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಹಮಾಸ್‌ ನಾಯಕರ ಮೇಲೆ ಇಸ್ರೇಲ್‌ ದಾಳಿ

ಹಮಾಸ್‌ ನಾಯಕನ ಪುತ್ರ ಸೇರಿ ಆರು ಮಂದಿ ಬಲಿ

ಟೆಲ್‌ಅವಿವ್‌: ಕತಾರ್‌ ರಾಜಧಾನಿ ದೋಹಾದಲ್ಲಿ ಇಸ್ರೇಲ್‌ ನಡೆಸಿದ ಭೀಕರ ವಾಯುದಾಳಿಯಲ್ಲಿ ನಮ್ಮ ನಾಯಕ ಬದುಕುಳಿದಿದ್ದಾರೆ. ಆದ್ರೆ ಹಮಾಸ್‌ ನಾಯಕ ಪುತ್ರ ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ ಬಂಡುಕೋರರ ಗುಂಪು ಅಧಿಕೃತ ಹೇಳಿಕೆ ನೀಡಿದೆ.

ಕತಾರ್‌ನ ರಾಜಧಾನಿ ದೋಹಾದಲ್ಲಿ ಮಂಗಳವಾರ ಹಮಾಸ್‌ ಹಿರಿಯ ನಾಯಕರ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ರಕ್ಷಣಾ ಪಡೆ ಮತ್ತು ಇಸ್ರೇಲ್ ಭದ್ರತಾ ಸಂಸ್ಥೆ ವಾಯುದಾಳಿ ನಡೆಸಿತ್ತು. ಇಸ್ರೇಲ್‌ನ ದಾಳಿಯ ವೇಳೆ ಹಮಾಸ್ ನಾಯಕರು ದೋಹಾದಲ್ಲಿ ಕದನ ವಿರಾಮದ ಬಗ್ಗೆ ಚರ್ಚಿಸುತ್ತಿದ್ದರು. ಗಾಜಾಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮದ ಪ್ರಸ್ತಾಪದ ಬಗ್ಗೆ ಚರ್ಚಿಸುತ್ತಿದ್ದಾಗ ದೋಹಾದಲ್ಲಿ ಹಮಾಸ್ ನಿಯೋಗದ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.





















































 
 

ಯುದ್ಧ ನಿಲ್ಲಬೇಕು, ಗಾಜಾದಿಂದ ಸೈನ್ಯ ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಗಾಜಾವನ್ನು ನೋಡಿಕೊಳ್ಳಲು ಬೇರೆಯೇ ಸಮಿತಿ ರಚನೆಯಾಗಬೇಕು ಎಂದು ಟ್ರಂಪ್‌ ಎಚ್ಚರಿಕೆ ಕೊಟ್ಟಿದ್ದರು. ಆ ಬೆನ್ನಲ್ಲೇ ಹಮಾಸ್‌ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಸೇನೆ ದಾಳಿ ನಡೆಸಿದೆ. ಆದರೆ ಇದೊಂದು ಹೇಡಿತನದ ದಾಳಿ ಎಂದು ಕತಾರ್‌ ಆಕ್ರೋಶ ವ್ಯಕ್ತಪಡಿಸಿದೆ. ಕದನ ವಿರಾಮ ಮತ್ತು ಯುದ್ಧ ಕೈದಿಗಳ ಕುರಿತು ಮಾತುಕತೆ ನಡೆಯುತ್ತಿದ್ದಾಗಲೇ ಇಸ್ರೇಲ್‌ ದಾಳಿ ನಡೆಸಿರುವುದನ್ನು ಹಮಾಸ್‌ ಖಂಡಿಸಿದೆ.

ಇದು ಆಕ್ರಮಣಕಾರಿ ಸ್ವರೂಪದ ಅಪರಾಧ ಕೃತ್ಯ. ಒಪ್ಪಂದದ ಸಾಧ್ಯತೆಗಳನ್ನು ಹಾಳು ಮಾಡುವ ಹಾಗೂ ನಿರಾಕರಿಸುವ ದೃಷ್ಟಿಕೋನವನ್ನು ತೋರಿಸುತ್ತದೆ. ಇದು ಘೋರ ಅಪರಾಧ, ಸ್ಪಷ್ಟ ಆಕ್ರಮಣ ಮಾತ್ರವಲ್ಲದೆ ಎಲ್ಲ ಅಂತಾರಾಷ್ಟ್ರೀಯ ನಿಯಮ ಮತ್ತು ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಪ್ಯಾಲೆಸ್ತೀನ್‌ ಗುಂಪು ಅಸಮಾಧಾನ ಹೊರಹಾಕಿದೆ. ಈ ದಾಳಿಯಲ್ಲಿ ಹಮಾಸ್ ನಾಯಕ ಖಲೀಲ್ ಅಲ್-ಹಯ್ಯನ ಪುತ್ರ, ಓರ್ವ ಸಹಾಯಕ ಸಿಬ್ಬಂದಿ, ಓರ್ವ ಭದ್ರತಾ ಅಧಿಕಾರಿ ಸೇರಿದಂತೆ ಕನಿಷ್ಠ 6 ಜನ ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ ದೃಢಪಡಿಸಿದೆ.

ಇಸ್ರೇಲ್ ಸೇನೆಯು ಎಕ್ಸ್‌ನಲ್ಲಿ ಹಮಾಸ್‌ ನಾಯಕರ ಮೇಲೆ ವಾಯುದಾಳಿ ನಡೆಸಿದ ಬಗ್ಗೆ ಸ್ಪಷ್ಟಪಡಿಸಿತ್ತು. ಸೂಕ್ತವಾದ ಮದ್ದುಗುಂಡುಗಳನ್ನು ಬಳಸಿ, ದೋಹಾದಲ್ಲಿರುವ ನಾಗರಿಕರಿಗೆ ಹಾನಿಯಾಗದಂತೆ ವಾಯು ದಾಳಿ ಮಾಡಲಾಗಿದೆ. ಇದಕ್ಕಾಗಿ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೆವು ಹಮಾಸ್ ನಾಯಕರ ವಿರುದ್ಧದ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

error: Content is protected !!
Scroll to Top