ಚೆನ್ನೈ: ವಿವಾಹಿತ ಮಹಿಳೆಯೊಬ್ಬಳನ್ನು ಇಸ್ಲಾಂ ಮತಕ್ಕೆ ಮತಾಂತರ ಮಾಡಿ, ವಿವಾಹವಾಗುವಂತೆ ಪೀಡಿಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ನೊಯ್ಡಾ ಪೊಲೀಸರು ತಿಳಿಸಿದ್ದಾರೆ.
ತನ್ನ ಮಗಳನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ಆಕೆಯ ತಾಯಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಕೋರ್ಟ್ ಆದೇಶದಂತೆ ಆರು ವರ್ಷದ ಮಗುವನ್ನು ಹೊಂದಿರುವ ಮಹಿಳೆಯನ್ನು ಪೊಲೀಸರು ಚೆನ್ನೈನಲ್ಲಿ ಪತ್ತೆಹಚ್ಚಿ ಮರಳಿ ಕರೆತಂದಿದ್ದಾರೆ.
ಆರೋಪಿಗಳು ಮಹಿಳೆಯನ್ನು ಸಂಬಂಧಕ್ಕೆ ಆಮಿಷವೊಡ್ಡಿ, ಬಲವಂತವಾಗಿ ಮತಾಂತರಿಸಿದ ನಂತರ ಆಕೆಯ ಹೆಸರನ್ನು ಬದಲಾಯಿಸಿದ್ದರು. ನಕಲಿ ದಾಖಲೆಗಳನ್ನು ಬಳಸಿ ಇಸ್ಲಾಮಿಕ್ ವಿವಾಹ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಇನ್ನೂ ತನ್ನ ಪತಿಯೊಂದಿಗೆ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರಲಿಲ್ಲ ಎಂದು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಪ್ರಮುಖ ಆರೋಪಿ ರಾಜಾ ಮಿಯಾನ್ ಕುಟುಂಬ ಈ ಅಪರಾಧದಲ್ಲಿ ಸಕ್ರಿಯ ಪಾತ್ರ ವಹಿಸಿದ್ದು, ಆತನ ತಾಯಿ ಮಹಿಳೆಯ ಚಿಕ್ಕಮ್ಮನಂತೆ ನಟಿಸಿದ್ದು, ಆತನ ಸಹೋದರ ಮದುವೆಗೆ ಅನುಕೂಲ ಮಾಡಿಕೊಡಲು ಆಕೆಯ ಸಹೋದರನಂತೆ ನಟಿಸಿದ್ದಾನೆ. ಸ್ಥಳೀಯ ಧರ್ಮಗುರುವೊಬ್ಬ ನಕಲಿ ನಿಕಾಹವನ್ನೂ ಮಾಡಿದ್ದ ಎಂದು ದಾಖಲಾಗಿದೆ. ರಾಜಾ ಮಿಯಾನ್, ಆತನ ತಂದೆ ಮತ್ತು ತಾಯಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ, ಸಹೋದರ ಮತ್ತು ಧರ್ಮಗುರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
























