ಪುತ್ತೂರು: ಅಹಂಕಾರ ದೂರ ಸರಿದು ಮಮಕಾರ ಇರುವಲ್ಲಿ ಶ್ರೇಯಸ್ಸು ಖಂಡಿತ. ಪರಮಾತ್ಮ, ಜೀವತ್ಮ ಜತೆಯಾದಾಗ ಧರ್ಮ ಉಳಿಯುವ ಕಾರ್ಯ ಆಗುತ್ತಿದೆ. ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಜತೆಗೆ ಧರ್ಮ ಕಾರ್ಯದ ಮೂಲಕ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ಆಗಲಿ ಎಂದು ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯೀ ನುಡಿದರು.
ಭಾನುವಾರ ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ನ.29 ಮತ್ತು 30 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹ ಹಾಗೂ ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿ ಅವರು ಆಶೀರ್ವಚನ ನೀಡಿದರು.
ಜಗತ್ತಿನ ದೇವರ ಕೋಣೆ ಭಾರತ. ಆಧ್ಯಾತ್ಮ ಗುರು ಸ್ಥಾನದಲ್ಲಿ ಭಾರತ ನಿಲ್ಲುತ್ತದೆ. ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸುವುದು ನಮ್ಮ ಮೂಲ ಉದ್ದೇಶವಾಗಬೇಕು. ಧಾರ್ಮಿಕ ಜೀವನ ಮಾಡಿದರೆ ಧರ್ಮ ರಕ್ಷಣೆ ಮಾಡಿದಂತೆ. ಜಗತ್ತನ್ನು ಪರಿವರ್ತನೆ ಮಾಡುವ ಸಾಮರ್ಥ್ಯ ಹಿಂದೂ ಸಮಾಜಕ್ಕೆ ಇದೆ. ಹಿಂದೂ ಸಮಾಜಕ್ಕೆ ಅವನತಿ ಇಲ್ಲ. ಹಿಂದೂ ಸಮಾಜಕ್ಕೆ ತೊಂದರೆ ಬಂದಾಗ ಅದನ್ನು ಒಗ್ಗಟ್ಟಿನ ಮೂಲಕ ದೂರೀಕರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ನ್ಯಾಯವಾದಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹ ಪ್ರಸಾದ್ ಮಾತನಾಡಿ, ನಾನು ಎನ್ನದೆ, ನಾವು ಎನ್ನುವುದು ಸಮರ್ಪಣೆ ಭಾವ. ದೇವದುರ್ಲಭ ಕಾರ್ಯಕರ್ತರು ಆ ಭಾವದಿಂದ ಸೇರಬೇಕು. ಆ ಮೂಲಕ ವಿಶೇಷ ಧರ್ಮ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ. ಶ್ರೀನಿವಾಸ ಕಲ್ಯಾಣೋತ್ಸವ, ಉಚಿತ ಸಾಮೂಹಿಕ ವಿವಾಹದೊಂದಿಗೆ ಆಡಂಬರ, ವಿದೇಶಿ ಸಂಸ್ಕೃತಿ ಆಚರಣೆ ನಡುವೆ ಸಮಾಜಕ್ಕೆ ಉತ್ತಮ ಸಂದೇಶ ಉದ್ದೇಶ ಹೊಂದಲಾಗಿದೆ. ಸಂಘದ ಯೋಚನೆ ಸಾಕಾರದ ಚಿಂತನೆಯಿದೆ. ಸಾಮಾನ್ಯರಿಗೂ ದೂರದ ಶ್ರೀನಿವಾಸನ ದರ್ಶನ ಆಗುವಂತೆ ೨ ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ ಮಾಡಲಾಗಿದ್ದು, ಈ ವರ್ಷವೂ ನನ್ನ ಮನೆಯ ಕಾರ್ಯಕ್ರಮ ಎಂಬಂತೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ವೈಭವ, ಶ್ರದ್ದಾ, ಭಕ್ತಿಯಿಂದ ನಡೆಯಲಿದೆ. ಟ್ರಸ್ಟ್ ಮೂಲಕ ಖರ್ಚು ವೆಚ್ಚ ಭರಿಸಿ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಹಿಂದೂ ಸಮಾಜದ ಮೇಲಾಗುತ್ತಿರುವ ದಾಳಿಗೆ ಉತ್ತರವಾಗಿ ಕಾರ್ಯಕ್ರಮ ಸಂದೇಶ ನೀಡಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನದ ಸಂದರ್ಭ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಸಮಯದ ಇದಾಗಿದೆ ಎಂದರು.
ಗೌರವಾಧ್ಯಕ್ಷ ಸಿದ್ಧನಾಥ್ ಕಂದಾರ, ಕಾರ್ಯಾಧ್ಯಕ್ಷ ಪ್ರಾಣೇಶ್, ಕೋಶಾಧಿಕಾರಿ ಉದಯ ಕುಮಾರ್ ರೈ, ಉಮೇಶ್ ಕೋಡಿಬೈಲು, ವೆಂಕಟ್ರಮಣ ಕಡಬ, ಭೀಮಯ್ಯ ಭಟ್, ರಾಜು ಶೆಟ್ಟಿ, ಅನಿಲ್ ತಂಕಿಲ, ಮನೀಶ್ ಕುಲಾಲ್, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರೇಮರಾಜ್, ಕೋಶಾಧಿಕಾರಿ ರೂಪೇಶ್ ನಾಯ್ಕ್, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಮಿತಿಯ ವಿವಿಧ ಪದಾಧಿಕಾರಿಗಳು ಹಾಗೂ ಸಂಚಾಲಕ-ಸಹ ಸಂಚಾಲಕರ ಪಟ್ಟಿಯನ್ನು ಅರುಣ್ ಕುಮಾರ್ ಪುತ್ತಿಲ ಘೋಷಿಸಿದರು.
ಅನ್ನಪೂರ್ಣ ರಾವ್ ಪ್ರಾರ್ಥಿಸಿದರು. ಅನಿಲ್ ತೆಂಕಿಲ ಸ್ವಾಗತಿಸಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ ವಂದಿಸಿದರು. ರವಿಕುಮಾರ್ ರೈ ಮಠ ಕಾರ್ಯಕ್ರಮ ನಿರ್ವಹಿಸಿದರು.
























