ಕಲ್ಲು ತೂರಾಟದ ಬಳಿಕ ಮಂಡ್ಯ ಉದ್ವಿಗ್ನ : ಹಿಂದೂಗಳಿಂದ ಬೃಹತ್‌ ಪ್ರತಿಭಟನೆ

ಲಾಠಿ ಚಾರ್ಜ್‌ ಮಾಡಿ ಪ್ರತಿಭಟನೆಕಾರರನ್ನು ಚದುರಿಸಿದ ಪೊಲೀಸರು

ಬೆಂಗಳೂರು: ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟನಡೆದ ಬಳಿಕ ಮಂಡ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.ಕಲ್ಲು ತೂರಾಟ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಮಸೀದಿ ಮುಂದೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ಉಂಟಾಗಿದ್ದು, ಈ ವೇಳೆ ಮತ್ತೆ ಕಲ್ಲು ತೂರಲಾಗಿದೆ. ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಮದ್ದೂರು ಪಟ್ಟಣದ ರಾಮ್‌ ರಹೀಂ ನಗರಕ್ಕೆ ಹೊಂದಿಕೊಂಡಿರುವ ಚನ್ನೇಗೌಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ ವಿಸರ್ಜನೆ ವೇಳೆ ಭಾನುವಾರ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.





















































 
 

ನಿಷೇಧಾಜ್ಞೆ ನಡುವೆಗೆ ಮದ್ದೂರು ಪಟ್ಟಣದಲ್ಲಿ ಸ್ಥಳೀಯರು, ಮಹಿಳೆಯರು, ಮಕ್ಕಳು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾ ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಸ್ಥಳೀಯರ ಪ್ರತಿಭಟನೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಸದಸ್ಯರು ಸಾಥ್‌ ನೀಡಿದರು. ಮದ್ದೂರು ಪಟ್ಟಣದ ಜಾಮಿಯಾ ಮಸೀದಿ ಬಳಿ ಪ್ರತಿಭಟನಾ ಮೆರವಣಿಗೆ ಆಗಮಿಸಿದ ವೇಳೆ ಮಸೀದಿಯ ರಸ್ತೆಯಲ್ಲಿ ಕರ್ಪೂರ ಕಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಸೀದಿ ಮುಂದೆ ಹಿಂದೂ ಕಾರ್ಯಕರ್ತರು ನೃತ್ಯ ಮಾಡಲು ಆರಂಭಿಸಿದರು. ಮಸೀದಿ ಜಾಗ ಬಿಟ್ಟು ಹೋಗುವಂತೆ ಪೊಲೀಸರು ಸೂಚಿಸಿದಾಗ ಕಾರ್ಯಕರ್ತರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳದಿಂದ ಕದಲಿಲ್ಲ. ಘೋಷಣೆ ಕೂಗುತ್ತಾ ಡ್ಯಾನ್ಸ್‌ ಮಾಡುತ್ತಿದ್ದಂತೆ ಪೊಲೀಸರು ಲಾಠಿ ಬೀಸಿದ್ದಾರೆ.

ಕಲ್ಲು ತೂರಿದವರ ಬಂಧನ ಆಗಿದೆ – ಪರಮೇಶ್ವರ

ಮಂಡ್ಯದ ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಆಗಿದೆ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ. ಕೆಲವು ಕಡೆ ಸಣ್ಣಪುಟ್ಟ ಘಟನೆ ಆಗಿವೆ. ಒಂದು ಕಡೆ ಚಿಕ್ಕಮಕ್ಕಳು ಮೆರವಣಿಗೆ ವೇಳೆ ಮೇಲಿಂದ ಉಗಿದಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ. ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದರು.

ಪದೇಪದೆ ಈ ರೀತಿಯ ಘಟನೆಗಳಾಗುತ್ತಿವೆ ಅಂದರೆ ಜನರೂ ಸ್ಪಂದಿಸಬೇಕು. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಎಲ್ಲ ರೀತಿಯ ಕ್ರಮಗಳನ್ನೂ ಈ ಬಾರಿಯ ಗಣೇಶೋತ್ಸವಗಳ ವೇಳೆ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳೂ ಭೇಟಿ ಕೊಟ್ಟಿದ್ದಾರೆ. ಆದರೂ ಒಂದೆರಡು ಮೂರು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ, ಕ್ರಮ ತಗೊಂಡಿದ್ದೇವೆ. ಬಿಜೆಪಿಯವರು ಆರೋಪ ಮಾಡುತ್ತಾರೆ, ಅವರದ್ದು ಅದೇ ಕೆಲಸ ಎಂದು ಹೇಳಿದರು.

ಎಸ್‌ಪಿ ಮಾಹಿತಿ

ತಮಿಳುನಾಡು ಕಾಲನಿಯಿಂದ ಹೊರಟ ಮೆರವಣಿಗೆಯ ಸಂದರ್ಭದಲ್ಲಿ ಒಂದು ಮಸೀದಿಯ ಬಳಿ ಕಲ್ಲು ತೂರಾಟ ನಡೆದಿದೆ. ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು, ಕರೆಂಟ್ ಕೂಡ ಆಫ್ ಆಯಿತು ಎಂದು ವರದಿಯಾಗಿದೆ ಎಂದು ಮಂಡ್ಯದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.

ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿದ್ದು, 21 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top