ಮಂಗಳೂರು: ದ್ವಿಚಕ್ರ ವಾಹನದಲ್ಲಿ ಟ್ರಿಪ್ಪಲ್ ರೈಡ್ ಸಂಚಾರ ಮಾಡಿದ ಪ್ರಕರಣದಲ್ಲಿ ಸವಾರನ ತಂದೆಗೆ ನ್ಯಾಯಾಲಯ ಬರೋಬ್ಬರಿ 27,500 ರೂ. ದಂಡ ವಿಧಿಸಿದೆ.
ಬಜಪೆಯಲ್ಲಿ ಮೂವರು ಅಪ್ರಾಪ್ತರು ಹೆಲ್ಮೆಟ್ ಕೂಡ ಧರಿಸದೆ ದ್ವಿಚಕ್ರ ವಾಹನದಲ್ಲಿ ಟ್ರಿಪ್ಪಲ್ ರೈಡ್ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಬಜ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಸಿಬ್ಬಂದಿಯೊಂದಿಗೆ ಆ.28ರಂದು ಸಾಯಂಕಾಲ ಸಮಯಕ್ಕೆ ಬಜ್ಪೆ ಪೇಟೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಒಂದು ದ್ವಿಚಕ್ರ ವಾಹನದಲ್ಲಿ ಮೂವರು ಅಪ್ರಾಪ್ತರು ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು.
ಬಳಿಕ ವಾಹನ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪೋಷಕರು ದ್ವಿಚಕ್ರ ವಾಹನ ನೀಡಿರುವುದು ದೃಢಪಟ್ಟಿದೆ. ಈ ಸಂಬಂಧ 199ಎ, 194ಸಿ, 194ಡಿ, 130 ಜೊತೆಗೆ 177 ಐಎಂವಿ ಕಾಯ್ದೆಯಡಿಯಲ್ಲಿ ದೋಷರೋಪಣ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಪೋಷಕರಿಗೆ 27,500 ರೂ. ದಂಡ ವಿಧಿಸಿ ಸೆ.3ರಂದು ತೀರ್ಪು ನೀಡಿದೆ.
























