ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಯಂತ್ರ ಬದಲಾಗಿ ಮತಪತ್ರ : ಸರ್ಕಾರದ ನಿಧಾರಕ್ಕೆ ಬಿಜೆಪಿ ಟೀಕೆ

136 ಶಾಸಕರು ಶಾಸಕರು ರಾಜೀನಾಮೆ ನೀಡಿ ಚುನಾವಣೆ ಎದುರಿಸಿ ಎಂದು ಸವಾಲು

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತಯಂತ್ರಗಳ ಬದಲಾಗಿ ಹಿಂದಿನ ಕಾಲದ ಮತಪತ್ರಗಳನ್ನು ಬಳಸುವ ರಾಜ್ಯ ಸರ್ಕಾರದ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಇದು ನಮ್ಮ ಅನುಭವದ ಮೇಲೆ ಕೈಗೊಂಡ ನಿರ್ಧಾರ ಎಂದು ಸಮರ್ಥಿಸಿದ್ದರೂ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದೆ.

ಸರ್ಕಾರದ ಸಂಪುಟದ ತೀರ್ಮಾನ ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದು ಸಿದ್ದರಾಮಯ್ಯ ಸ್ವಯಂ ಪ್ರಮಾಣೀಕರಿಸಿಕೊಂಡಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಬ್ಯಾಲಟ್ ಪೇಪರ್ ಮೇಲೆ ನಂಬಿಕೆ ಇಟ್ಟಿರುವ ರಾಜ್ಯ ಸರ್ಕಾರ, ಮತಯಂತ್ರ ಬಳಸಿ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಆರಿಸಿ ಬಂದಿರುವ 136 ಕಾಂಗ್ರೆಸ್ ಶಾಸಕರಿಂದ ಮೊದಲು ರಾಜೀನಾಮೆ ಕೊಡಿಸಲಿ. ರಾಜ್ಯದಿಂದ ಆಯ್ಕೆಯಾದ ಒಂಬತ್ತು ಕಾಂಗ್ರೆಸ್ ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಲಿ, ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.





















































 
 

ದೇಶದಲ್ಲಿ ಅತಿಹೆಚ್ಚು ಅಕ್ರಮ ಮತದಾನ, ಮತಗಳ್ಳತನದ ದೂರುಗಳು, ಚುನಾವಣಾ ದೌರ್ಜನ್ಯದ ಘಟನೆಗಳು, ಚುನಾವಣಾ ಅಕ್ರಮಗಳು ನಡೆದ ಬಗ್ಗೆ ನ್ಯಾಯಾಲಯಗಳಲ್ಲಿ ದೂರುಗಳು ಅತಿಹೆಚ್ಚು ದಾಖಲಾಗಿದ್ದರೆ ಅದು ಮತಪತ್ರ ಆಧರಿಸಿ ನಡೆಸಿದ ಚುನಾವಣೆಗಳಲ್ಲಿ. ಅದೂ ಕಾಂಗ್ರೆಸ್ಸಿಗರ ಮೇಲೆಯೇ ಹೆಚ್ಚು ಎಂಬುದನ್ನು ಕಾಂಗ್ರೆಸ್ಸಿಗರು ಇತಿಹಾಸದ ಪುಟಗಳನ್ನು ತೆರೆದು ನೋಡಲಿ. ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣವಾಗಿದ್ದು ಅವರು ನಡೆಸಿದ ಮತಗಳ್ಳತನ ಹಾಗೂ ಅಕ್ರಮ ಚುನಾವಣೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಿಂದ ಎಂಬ ಇತಿಹಾಸವನ್ನು ದೇಶದ ಜನ ಮರೆತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮತ ಪತ್ರ ಆಧರಿಸಿದ ಚುನಾವಣೆಗಳಲ್ಲಿ ಅಕ್ರಮ ಹಾಗೂ ಮತಗಳ್ಳತನ ನಡೆಸುವುದರಲ್ಲಿ ನಿಷ್ಣಾತರಾದ ಕಾಂಗ್ರೆಸ್ಸಿಗರು ಚುನಾವಣೆಗಳ ನಿರಂತರ ಸೋಲುಗಳಿಂದ ಮೂಲೆಗುಂಪಾಗುತ್ತಿರುವ ಪರಿಸ್ಥಿತಿಯಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಾರಣದಿಂದಾಗಿ ಆಧಾರ ರಹಿತ, ಅಪ್ರಬುದ್ಧ, ವಿತಂಡ ವಾದವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರು ಮತಗಳ್ಳತನದ ಹೆಸರಿನಲ್ಲಿ ಬಾಲಿಶ ವಿವಾದ ಹುಟ್ಟು ಹಾಕಲು ಹೊರಟಿದ್ದಾರೆ, ಇದನ್ನು ಬೆಂಬಲಿಸಲು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರವನ್ನು ಬಳಸಿ ಚುನಾವಣೆ ನಡೆಸುವುದಾಗಿ ನಿರ್ಣಯ ಕೈಗೊಂಡಿದೆ. ಇಡೀ ದೇಶ, ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ನಡೆಯುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಂತ್ರಜ್ಞಾನವನ್ನು ಅಪಮಾನಿಸಿ ಹೆಬ್ಬೆಟ್ಟಿನ ದಿನಗಳನ್ನು ನೆನಪಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಮತ್ತೆ ಹೆಬ್ಬೆಟ್ಟಿನ ಕಾಲಕ್ಕೆ ಕೊಂಡೊಯ್ಯುತ್ತಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ. ಇಡೀ ಜಗತ್ತು ತಂತ್ರಜ್ಞಾನ ಮುಂದುವರಿಯುತ್ತಿರುವಾಗ ಕಾಂಗ್ರೆಸ್‌ ಮಾತ್ರ ಕಾಲದ ಓಟದಲ್ಲಿ ಹಿಂದಕ್ಕೆ ಓಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮತಯಂತ್ರ ಬೇಡ ಎನ್ನುವ ಸರ್ಕಾರಮುಂದೆ ಗೋಗಲ್‌ ಪೇ, ಯುಪಿಐ, ಎಟಿಎಂನಂಥ ತಂತ್ರಜ್ಞಾನಗಳನ್ನು ಕೂಡ ಬೇಡ ಎನ್ನುವ ಅಪಾಯವಿದೆ ಎಂದು ಹಿರಿಯ ನಾಯಕ ಸುರೇಶ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top