ಧರ್ಮಸ್ಥಳ ಪ್ರಕರಣ : ಬುರುಡೆಯನ್ನು ಮಟ್ಟಣ್ಣವರ್‌ ಮಡಿಲಿಗೆ ಹಾಕಿದ ಜಯಂತ್‌

ಷಡ್ಯಂತ್ರದ ಇನ್ನಷ್ಟು ರಹಸ್ಯಗಳು ಬಯಲು

ಮಂಗಳೂರು: ಧರ್ಮಸ್ಥಳದ ಬುರುಡೆ ಈಗ ಗಿರೀಶ್ ಮಟ್ಟಣ್ಣನವರ್ ಬುಡಕ್ಕೆ ಬಂದುನಿಂತಿದೆ. ಹೋರಾಟಗಾರ ಜಯಂತ್‌ ಟಿ. ವಿಚಾರಣೆ ವೇಳೆ ಎಸ್ಐಟಿ ಮುಂದೆ ನನಗೆ ಬುರುಡೆ ಕೊಟ್ಟಿದ್ದೇ ಗಿರೀಶ್ ಮಟ್ಟಣ್ಣನವರ್ ಎಂದಿದ್ದಾರೆ.

ಬುರುಡೆ ಮೂಲ ಕೆದಕಲು ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್‌ರನ್ನು ಶುಕ್ರವಾರ ವಿಚಾರಣೆಗೆ ಕರೆಯಲಾಗಿತ್ತು. ಬೆಳ್ತಂಗಡಿಯ ಎಸ್ಐಟಿ ಠಾಣೆಯಲ್ಲಿ ತಡರಾತ್ರಿವರೆಗೂ ಇಬ್ಬರನ್ನು ಪ್ರತ್ಯೇಕವಾಗಿ ಕೂರಿಸಿ ಪ್ರಶ್ನೆಗಳನ್ನು ಕೇಳಲಾಗಿದೆ. ನನಗೆ ಬುರುಡೆ ಕೊಟ್ಟಿದ್ದು ಗಿರೀಶ್ ಮಟ್ಟಣ್ಣನವರ್‌ ಎಂದು ಜಯಂತ್ ಹೇಳಿದ್ದಾರೆ. ಆದರೆ ಗಿರೀಶ್ ಮಟ್ಟಣ್ಣನವರ್ ಬುರುಡೆ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಹೀಗಾಗಿ ಬುರುಡೆ ಮೂಲ ಕುತೂಹಲ ಮೂಡಿಸಿದೆ.





















































 
 

ಇದರ ಜೊತೆಗೆ ಸುಜಾತ ಭಟ್ ಸಂದರ್ಶನ ಮಾಡಿ ಸುದ್ದಿಯಾಗಿದ್ದ ಯೂಟ್ಯೂಬರ್‌ ಅಭಿಷೇಕ್‌ನನ್ನು ಎಸ್ಐಟಿ ಟೀಂ ವಿಚಾರಣೆ ನಡೆಸಿದೆ. ಗಿರೀಶ್ ಮಟ್ಟಣ್ಣನವರ್, ಜಯಂತ್ ರೀತಿ ಪ್ರತ್ಯೇಕವಾಗಿ ಅಭಿಷೇಕ್‌ನನ್ನು ವಿಚಾರಣೆ ಮಾಡಲಾಗಿದ್ದು, ಬುರುಡೆ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.
ಕೊಲೆಯಾಗಿದ್ದ ಸೌಜನ್ಯಳ ಮಾವ ವಿಠಲ ಗೌಡನ ಅವರನ್ನೂ ಎಸ್ಐಟಿ ವಿಚಾರಣೆ ನಡೆಸಿದೆ. ವಿಠಲಗೌಡ, ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಜೊತೆ ನಿಕಟ ಸಂಪರ್ಕದಲ್ಲಿದ್ದರು. ಹೀಗಾಗಿ ಬುರುಡೆ ಪ್ರಕರಣದಲ್ಲಿ ವಿಠಲಗೌಡ ಭಾಗಿಯಾಗಿರುವ ಆರೋಪವಿದೆ.

ಕೊಡಗಿನಲ್ಲೂ ನಡೆದಿತ್ತು ಷಡ್ಯಂತ್ರ

ಬುರುಡೆ ಗ್ಯಾಂಗ್ ಸದಸ್ಯರು ಕಳೆದ ವರ್ಷ ಕೊಡಗು ಜಿಲ್ಲೆಗೂ ಭೇಟಿ ನೀಡಿ ಜನತೆಯಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಗೊಂದಲ ಮೂಡಿಸಿ ಹುನ್ನಾರ ನಡೆಸಿದ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಕ್ಷೇತ್ರದ ಭಕ್ತರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದರು. ದೂರಿನಲ್ಲಿ ಸಮಗ್ರ ದಾಖಲೆ ನೀಡಿದ್ದರಿಂದ ವರಿಷ್ಠಾಧಿಕಾರಿಗಳು ಬುರುಡೆ ಗ್ಯಾಂಗ್ ಸದಸ್ಯರ ಕಪೋಲಕಲ್ಪಿತ ಕಾರ್ಯಾಚರಣೆಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದರು. ವಿಫಲಗೊಂಡ ಬೆನ್ನಲ್ಲೇ ಗ್ಯಾಂಗ್‌ ಸದಸ್ಯರು ಜಿಲ್ಲೆಯಿಂದ ಕಾಲ್ಕಿತ್ತಿದ್ದರು.

2024 ಡಿಸೆಂಬರ್ ಅವಧಿಯಲ್ಲಿ ಜಯಂತ್ ಟಿ ಮತ್ತು ರೀನಾ ಸೇರಿದಂತೆ ಬೆಂಗಳೂರು ಮತ್ತು ಮಂಗಳೂರಿನ ಕೆಲವು ವ್ಯಕ್ತಿಗಳು ಕೊಡಗು ಜಿಲ್ಲೆಯ ವಿರಾಜಪೇಟೆ, ಶುಂಠಿ ಕೊಪ್ಪ ಕುಶಾಲನಗರ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿದ್ದರು. ಅಷ್ಟೇ ಅಲ್ಲದೇ ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರನ್ನು ಭೇಟಿ ಮಾಡಿ ಅವರ ಮೂಲಕ ಕೆಲವು ಕಪೋಲಕಲ್ಪಿತ ದೂರುಗಳನ್ನು ಪಡೆದು ಪೊಲೀಸ್ ಠಾಣೆಗೆ ನೀಡುವಲ್ಲಿ ಬಹುತೇಕ ಯಶಸ್ವಿಯಾಗಿದ್ದರು.

ಗ್ರಾಮೀಣ ಭಾಗದ ಮಹಿಳೆಯರಿಂದ ಕ್ಷೇತ್ರದ ಯೋಜನೆ ಬಗ್ಗೆ ತಪ್ಪು ಮಾಹಿತಿಗಳನ್ನ ಒಳಗೊಂಡಂತೆ ವಿಡಿಯೋ ದಾಖಲಿಸಿ ನಂತರ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಸಹ ನಡೆಸಿದ್ದರು. ವಿರಾಜಪೇಟೆ ಶುಂಠಿಕೊಪ್ಪ ಮತ್ತಿತರ ಕಡೆ ನೀಡಿರುವ ದೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ಹೆಸರನ್ನು ಸಹ ಉಲ್ಲೇಖಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ತಮಗೆ ಬೇಕಾದಂತೆ ಮಾಹಿತಿ ಕಲೆ ಹಾಕಿ ಕೆಲವು ಮಹಿಳೆಯರಿಂದ ಹೇಳಿಕೆ ಪಡೆದಿದ್ದರು. ಹೇಳಿಕೆ ಪಡೆದ ನಂತರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದರು. ವಿರಾಜಪೇಟೆ ಮತ್ತು ಶುಂಠಿಕೊಪ್ಪದಲ್ಲಿ ಎರಡು ಪ್ರಕರಣಗಳನ್ನು ದಾಖಲಿಸುವಲ್ಲಿ ಕೂಡ ಈ ತಂಡ ಯಶಸ್ವಿಯಾಗಿತ್ತು.

ಮೈಕ್ರೋ ಫೈನಾನ್ಸ್ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಕೊಡಗು ಸೇರಿದಂತೆ ನೆರೆಯ ಮೈಸೂರು ಹಾಸನ, ಮಂಡ್ಯ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬುರುಡೆ ಗ್ಯಾಂಗ್‌ ಹಲವು ಸಭೆಗಳನ್ನು ನಡೆಸಿತ್ತು. ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅನಿಲ್ ಕುಮಾರ್ ಅವರ ಮೇಲೆ ದೂರು ದಾಖಲಿಸಲು ರೆಡಿಮೇಡ್ ದೂರಿನ ಪ್ರತಿಗಳನ್ನು ಕೂಡ ವಿತರಣೆ ಸಹ ಮಾಡಲಾಗಿತ್ತು. ಆದರೆ ಮಹಿಳಾ ಸದಸ್ಯರು ಆಸಕ್ತಿ ತೋರಿಸದ ಕಾರಣ ಈ ಬುರುಡೆ ಗ್ಯಾಂಗ್‌ ಜಿಲ್ಲೆಯಿಂದ ಕಾಲ್ಕಿತ್ತಿತ್ತು ಎಂದು ತಿಳಿದುಬಂದಿದೆ.

error: Content is protected !!
Scroll to Top