ಬುರುಡೆ, ಸುಜಾತ ಭಟ್ ಎಪಿಸೋಡ್ ಹಿನ್ನೆಲೆಯಲ್ಲಿ ಎಸ್‌ಐಟಿ ಗ್ರಿಲ್
ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಸಾಕ್ಷಿ-ದೂರುದಾರನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ಪೊಲೀಸರು ವಶಕ್ಕೆ ಪಡೆದ ತಲೆಬುರುಡೆಯ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಕಾರ್ಯಕರ್ತ ಜಯಂತ್ ಟಿ ಹಾಗೂ ಯೂಟ್ಯೂಬರ್ ಅಭೀಷೇಕ್‌ನನ್ನು ಗುರುವಾರ ವಿಚಾರಣೆಗೊಳಪಡಿಸಿದ್ದಾರೆ. ಜಯಂತ್ ಟಿ.ಯನ್ನು ತಡರಾತ್ರಿಯವರೆಗೆ ವಿಚಾರಣೆ ನಡೆದಿದ್ದು, ಬಳಿಕ ಬಿಟ್ಟುಕೊಟ್ಟು ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ದಾಖಲಾಗಿರುವ ಸುಳ್ಳು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಗುರುವಾರ ಸುಮಾರು 20 ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಸುಳ್ಳು ವರದಿ ಆರೋಪದ ಮೇಲೆ ಯೂಟ್ಯೂಬರ್ ಅಭಿಷೇಕ್‌ನನ್ನು ತನಿಖಾಧಿಕಾರಿಗಳು ಪ್ರಶ್ನಿಸಿದರು. ಜಯಂತ್ ಟಿ. ಸಂಜೆ 5.30ರ ವೇಳೆಗೆ ಬ್ಯಾಗ್ ಜೊತೆಗೆ ಎಸ್‌ಐಟಿ ಕಚೇರಿಗೆ ಬಂದಿದ್ದು, ತಡರಾತ್ರಿ 2.30ರ ತನಕ ಅವರ ವಿಚಾರಣೆ ನಡೆದಿದೆ.
ಸುಜಾತ ಭಟ್ ಪ್ರಕರಣದಲ್ಲಿ ವಿಚಾರಣೆಗಾಗಿ ವಶದಲ್ಲಿರುವ ಯೂಟ್ಯೂಬರ್ ಅಭಿಷೇಕ್‌ನನ್ನು ಗುರುವಾರ ತಡಡರಾತ್ರಿ ತನಕ ವಿಚಾರಣೆ ನಡೆಸಲಾಗಿದೆ. ಮತ್ತೆ ಇಂದು ವಿಚಾರಣೆ ಮುಂದುವರಿಯಲಿದೆ. ಸುಜಾತ ಭಟ್ ಎಪಿಸೋಡ್ ಕೂಡ ಷಡ್ಯಂತ್ರದ ಒಂದು ಭಾಗವಾಗಿತ್ತು ಎನ್ನುವುದು ಪತ್ತೆಯಾದ ಬಳಿಕ ಅಭಿಷೇಕ್‌ನನ್ನು ವಶಕ್ಕೆ ಪಡೆಯಲಾಗಿದೆ.
ಬುಧವಾರದಂದು, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಆಟೋ ಚಾಲಕ ಉದಯ್ ಕುಮಾರ್ ಜೈನ್ ಅವರನ್ನು ಆಶ್ರಮದ ಬಳಿಯ ಸಮಾಧಿ ಸ್ಥಳಗಳಲ್ಲಿ ಒಂದರಲ್ಲಿ ದೂರುದಾರರು ನೋಡಿರುವುದಾಗಿ ಹೇಳಿದ ನಂತರ ವಿಚಾರಣೆ ನಡೆಸಲಾಗಿತ್ತು.
























