ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೇಸ್‌ ಹಿಂದೆಗೆತ ಭಾಗ್ಯ

ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣವೂ ವಾಪಸ್‌

ಬೆಂಗಳೂರು : ವಿವಿಧ ಸಂದರ್ಭಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ರಾಜ್ಯದ ಬೇರೆ ಬೇರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 15ಕ್ಕೂ ಹೆಚ್ಚಿನ ಪ್ರಕರಣಗಳು, ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್‌ ಠಾಣೆ ಮೇಲೆಯೇ ಕಲ್ಲು ತೂರಿ ದಾಂಧಲೆ ಎಬ್ಬಿಸಿದ್ದ ಪ್ರಕರಣ ಸೇರಿ 60 ಪ್ರಕರಣಗಳನ್ನು ಹಿಂಪಡೆಯಲು ಗುರುವಾರದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಜಾರಿ ನಿರ್ದೇಶನಾಲಯ(ಇ.ಡಿ) 2019 ಜೂನ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿದ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅದರಲ್ಲೂ ಕನಕಪುರ, ರಾಮನಗರಗಳಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ್ದರು. ಈ ಕುರಿತು ಸಾತನೂರು, ಕನಕಪುರ, ಕೋಡಿಹಳ್ಳಿ, ಬೀದರ್‌ ಜಿಲ್ಲೆಯ ಕಮಲಾನಗರ ಸೇರಿ ಹಲವು ಪೊಲೀಸ್‌ ಠಾಣೆಗಳಲ್ಲಿ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಹೀಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಖಲಾದ ಎಲ್ಲ ಪ್ರಕರಣಗಳನ್ನೂ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ.





















































 
 

2021ರ ಮಾ. 25ರಂದು ಅಂದಿನ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕಿ ಪುಷ್ಪಾ ಅಮರನಾಥ್‌ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಕುರಿತು ದಾಖಲಾಗಿದ್ದ ಪ್ರಕರಣವನ್ನೂ ರದ್ದು ಮಾಡಲಾಗುತ್ತಿದೆ. 2022ರ ಏ.12ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪುಪಟ್ಟಿ ತೋರಿಸಿದ ಕಾರಣಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣ, ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ಖಂಡಿಸಿ ಹಾವೇರಿಯಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ.

ಹಸುಗಳನ್ನು ಸಾಗಿಸುತ್ತಿದ್ದ ವಾಹನ ಹಿಡಿದಿದ್ದನ್ನು ಖಂಡಿಸಿ, ಹಸುಗಳನ್ನು ಮತ್ತು ವಾಹನವನ್ನು ಬಿಡುವಂತೆ ಆಗ್ರಹಿಸಿ 2019ರ ಆ.11ರಂದು ಚಿತ್ತಾಪುರ ಪೊಲೀಸ್‌ ಠಾಣೆ ಮೇಲೆ 25ರಿಂದ 30 ಮಂದಿ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಿದ್ದರು. ಈ ಕುರಿತು ಸುಮಾರರು 30 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈಗ ಆ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ.

error: Content is protected !!
Scroll to Top