ಮಹಿಳಾ ಎಸ್ಪಿಯನ್ನು ನಾಯಿಗೆ ಹೋಲಿಸಿದ ಶಾಸಕನ ವಿರುದ್ಧ ಕೇಸ್‌

ಬೆಂಗಳೂರು : ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಶಾಮನೂರು ಮನೆತನದ ನಾಯಿಗೆ ಹೋಲಿಸಿ ಅವಮಾನ ಮಾಡಿದ ಆರೋಪದ ಮೇರೆಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ವಿರುದ್ಧ ದಾವಣಗೆರೆಯ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಶಾಸಕ ಬಿ.ಪಿ. ಹರೀಶ್‌ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸ್ವತಃ ಎಸ್ಪಿ ಉಮಾ ಪ್ರಶಾಂತ್‌ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌) ಕಾಲಂ 79 (ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವುದು) ಹಾಗೂ 132 (ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಬಿ.ಪಿ. ಹರೀಶ್‌ ಅವರು ಶಾಮನೂರು ಮನೆತನದ ಬಾಗಿಲಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೊಮೇರಿಯನ್‌ ನಾಯಿಯ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ವರದಿಗಾರರ ಜೊತೆ ಮಾತನಾಡುವಾಗ ಎಸ್​​ಪಿ ಉಮಾ ಪ್ರಶಾಂತ್‌​​ರನ್ನು ಉದ್ದೇಶಿಸಿ ಮಾತನಾಡುವಾಗ ‘ಶಾಮನೂರು ಮನೆ ಶ್ವಾನದ ತರ ಆಡುತ್ತಾರೆ’ ಎಂದು ಶಾಸಕ ಬಿ.ಪಿ ಹರೀಶ್ ಕೀಳು ಮಟ್ಟದ ಭಾಷೆ ಬಳಸಿದ್ದರು.





















































 
 

ಶಾಸಕರ ಪದ ಬಳಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿಗೆ ಕಾರಣವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಸ್​​ಪಿ ಪರ ನಿಂತಿದೆ. ತಕ್ಷಣಕ್ಕೆ ಶಾಸಕರು ಎಸ್​​ಪಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಉಮಾ ಪ್ರಶಾಂತ್ ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನ್ಯಾಮತಿ ಪಟ್ಟಣದ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಕಳೆದ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ತಿಳಿಗೊಳಿಸಿದ್ದಾರೆ. ಅಂತಹ ದಕ್ಷ ಅಧಿಕಾರಿಯನ್ನು ನಿಂದನೆ ಮಾಡಿದ್ದು ಸರಿಯಲ್ಲ. ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಮಹಾಸಭೆ ಆಗ್ರಹಿಸಿದೆ.

error: Content is protected !!
Scroll to Top