ಆರೋಪಿಗಳ 18 ಲ.ರೂ. ಮೌಲ್ಯದ ಎರಡು ಕಾರುಗಳು ವಶ
ಉಡುಪಿ: ಕುಂದಾಪುರ ಸಮೀಪ ಕಾರ್ಯಾಚರಿಸುತ್ತಿದ್ದ ಹನಿಟ್ರ್ಯಾಪ್ ಜಾಲವೊಂದನ್ನು ಬೇಧಿಸಿರುವ ಪೊಲೀಸರು ಮಹಿಳೆ ಸಹಿತ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧಿ ಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್(26) ಮತ್ತು ಕುಂದಾಪುರ ಎಂ.ಕೋಡಿಯ ಆಸ್ಮಾ(43) ಬಂಧಿತ ಆರೋಪಿಗಳು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 18,00,000 ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಕೋಟೇಶ್ವರ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಸಂದೀಪ್ ಕುಮಾರ್ ಎಂಬವರು ಸುಮಾರು 3 ತಿಂಗಳ ಹಿಂದೆ ಕುಂದಾಪುರಕ್ಕೆ ಭೇಟಿ ನೀಡಿದ್ದಾಗ ಪ್ರಮುಖ ಆರೋಪಿ ಅಬ್ದುಲ್ ಸವದ್‌ನ ಪರಿಚಯವಾಗಿತ್ತು. ಸವದ್ ಮೂಲಕ ಸಂದೀಪ್ ಕುಮಾರ್‌ಗೆ ಆಸ್ಮಾ ಸೇರಿ ಉಳಿದ ಆರೋಪಿಗಳ ಪರಿಚಯವಾಗಿತ್ತು. ಆಸ್ಮಾ ಅವರನ್ನು ತನ್ನ ಮೋಹದ ಬಲೆಗೆ ಕೆಡವಿಕೊಂಡಿದ್ದಳು. ನಂತರ ಅವರು ಸೆಪ್ಟೆಂಬರ್ 2ರಂದು ಕುಂದಾಪುರಕ್ಕೆ ಆಹ್ವಾನಿಸಿದರು. ಅಲ್ಲಿಂದ ರಿಕ್ಷಾದಲ್ಲಿ ಕೋಟೇಶ್ವರ ಸಮೀಪ ಇರುವ ಬಾಡಿಗೆ ಮನೆಗೆ ಆಸ್ಮಾ ಕರೆದುಕೊಂಡು ಹೋಗಿದ್ದಳು. ಅಲ್ಲಿ ಉಳಿದ ಆರೋಪಿಗಳು ಸೇರಿ ಬೆದರಿಸಿ 3 ಲ.ರೂ. ಕೊಡಲು ಹೇಳಿದ್ದರು. ಸಂದೀಪ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ಅವರ ಮೇಲೆ ಹಲ್ಲೆ ಮಾಡಿದ್ದರು. ಕೈ ಕಾಲು ಕಟ್ಟಿ ಹಾಕಿ ಅವರ ಬಳಿಯಿದ್ದ 6200 ರೂ. ಕಸಿದುಕೊಂಡಿದ್ದರು.
ಮತ್ತಷ್ಟು ಹಣ ಕೇಳಿದಾಗ ಸಂದೀಪ್ ಇಲ್ಲ ಎಂದಿದ್ದಾರೆ. ಆಗ ಆರೋಪಿಗಳು ಕೊಲೆ ಮಾಡುವ ಬೆದರಿಕೆ ಒಡ್ಡಿದ್ದು, ಸಂದೀಪ್ 30 ಸಾವಿರ ರೂ. ಮೊಬೈಲ್‌ನಿಂದ ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಗಳು ಅವರ ಎಟಿಎಂ ಕಾರ್ಡ್ ಕಿತ್ತುಕೊಂಡು ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ 40,000 ರೂ. ವಿದ್‌ಡ್ರಾ ಮಾಡಿಕೊಂಡಿದ್ದರು. ಎಟಿಎಂನ್ನು ತಮ್ಮ ಬಳಿಯೇ ಇಟ್ಟುಕೊಂಡು ರಾತ್ರಿ 11.30 ವೇಳೆಗೆ ಸಂದೀಪ್‌ರನ್ನು ಬಿಟ್ಟು ಕಳುಹಿಸಿದ್ದರು. ಸಂದೀಪ್ ಬುಧವಾರ ಕುಂದಾಪುರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಕ್ಷಿಪ್ರವಾಗಿ ಕಾರ್ಯಾಚರಣೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
























