ಮಂಗಳೂರು : ನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ವೊಂದರಿಂದ ಸುಮಾರು 9.46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಜಗದೀಶ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ.
ಜಗದೀಶ್ ಮತ್ತವರ ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಈ ಫ್ಲ್ಯಾಟ್ನಲ್ಲಿ ಜಗದೀಶ್ರ ಪತ್ನಿ ಒಬ್ಬರೇ ಇದ್ದರು. ಅವರ ಆರೋಗ್ಯ ಸರಿ ಇಲ್ಲದ ಕಾರಣ ಮಹಿಳೆಯೊಬ್ಬರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಮನೆ ಕೆಲಸದಾಕೆ ಕಳೆದ ಜು.21ರಿಂದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಳು. ಫೋನ್ ಕರೆಗಳನ್ನು ಕೂಡ ಸ್ವೀಕರಿಸುತ್ತಿರಲಿಲ್ಲ.
ಬಳಿಕ ಜಗದೀಶ್ರ ಪತ್ನಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಾಯಿ ಮನೆಗೆ ಹೋಗಿ ಉಳಿದುಕೊಂಡಿದ್ದರು. ಫ್ಲ್ಯಾಟ್ನಲ್ಲಿ ಅವರ ಅಕ್ಕನ ಮಗ ಮಾತ್ರ ಇದ್ದರು. ಆ.15ರಂದು ಚಿನ್ನಾಭರಣಗಳನ್ನು ಇಟ್ಟಿದ್ದ ಕರಡಿಗೆಯನ್ನು ತರುವಂತೆ ಜಗದೀಶ್ರ ಪತ್ನಿ ಅಕ್ಕನ ಮಗನಿಗೆ ಹೇಳಿದ್ದರು. ಅದರಂತೆ ಆತ ಆಭರಣವಿದ್ದ ಕರಡಿಗೆ ತೆರೆದು ನೋಡಿದಾಗ ಚಿನ್ನದ ಬಳೆಗಳು, ಬ್ರಾಸ್ಲೆಟ್ ಬೆಂಡೋಲೆ, ಚಿನ್ನದ ಉಂಗುರಗಳ ಸಹಿತ 9.46 ಲ.ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಮನೆ ಕೆಲಸದಾಕೆ ಹೇಳದೆ ಕೇಳದೆ ಕೆಲಸ ಬಿಟ್ಟಿದ್ದರಿಂದ ಮತ್ತು ಆ ಬಳಿಕದ ಅವಧಿಯಲ್ಲಿ ಮೊಬೈಲ್ ಕರೆಗಳನ್ನು ಸ್ವೀಕರಿಸದೆ ಇರುವುದರಿಂದ ಹಾಗೂ ಆಕೆಯ ಬಳಿ ಫ್ಲ್ಯಾಟ್ನ ಕೀ ಕೂಡ ಇದ್ದುದರಿಂದ ಆಕೆಯೇ ಚಿನ್ನಾಭರಣ ಕಳವು ಮಾಡಿರುವ ಸಂಶಯವಿದೆ ಎಂದು ಕದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
























