ಕರೆ ಮಾಡಿ, ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಪೊಲೀಸ್ ಸಿಬ್ಬಂದಿ
ಮಂಗಳೂರು: ಮಹಿಳೆಗೆ ಅಶ್ಲೀಲ ಕರೆ ಮತ್ತು ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ತೋಡಾರು ಬಳಿಯ ವಿವಾಹಿತ ಮಹಿಳೆಯೊಬ್ಬರು ಆಗಸ್ಟ್ 23ರಂದು ಕೌಟುಂಬಿಕ ಕಲಹದ ಬಗ್ಗೆ ದೂರು ನೀಡಲು ಠಾಣೆಗೆ ಭೇಟಿ ನೀಡಿದ್ದರು. ಆಗ ಇನ್ಸ್ಪೆಕ್ಟರ್ ಸಂದೇಶ್ ಅವರು ಪತಿ ಮತ್ತು ಪತ್ನಿ ಇಬ್ಬರನ್ನೂ ಕರೆದು ಮಧ್ಯಸ್ಥಿಕೆ ವಹಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಕಳುಹಿಸಿದ್ದರು.
ಆದರೆ ಪೊಲೀಸ್ ಸಿಬ್ಬಂದಿ ಶಾಂತಪ್ಪ ಮಹಿಳೆಯ ದೂರಿನ ಪ್ರತಿಯಿಂದ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಆಗಸ್ಟ್ 25ರಿಂದ ಸೆಪ್ಟೆಂಬರ್ 1 ರವರೆಗೆ ಅವರನ್ನು ಸಂಪರ್ಕಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಪದೇಪದೆ ಕರೆ ಮಾಡಿ ಮತ್ತು ಸಂದೇಶ ಕಳುಹಿಸಿ ಅಶ್ಲೀಲವಾಗಿ ಮಾತನಾಡಿದ್ದಾರೆ ಮತ್ತು ಭೇಟಿಯಾಗಲು ಕೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸೆಪ್ಟೆಂಬರ್ 1ರಂದು ಮಹಿಳೆ ಮತ್ತೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಬಂದು ಶಾಂತಪ್ಪ ಅವರ ವಿರುದ್ಧ ದೂರು ದಾಖಲಿಸಿ, ಕರೆ ದಾಖಲೆಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದಾರೆ. ಶಾಂತಪ್ಪ ವಿರುದ್ಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
























