ವಿಚಾರಣೆಗೆ ಹಾಜರಾದ ಸೌಜನ್ಯಾ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಉದಯಕುಮಾರ್ ಜೈನ್
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ದಿನಕಳೆದಂತೆ ಅನೂಹ್ಯ ತಿರುವುಗಳನ್ನು ಪಡೆಯುತ್ತಿದೆ. ಇಂದು ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಆರೋಪಿಗಳನ್ನು ಎಸ್‌ಐಟಿ ಇಂದು ವಿಚಾರಣೆಗೆ ಕರೆಸಿರುವುದು ಕುತೂಹಲ ಮೂಡಿಸಿದೆ. ಈ ನಡೆಯಿಂದ ಸೌಜನ್ಯಾ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿತಾ ಎಂಬ ಪ್ರಶ್ನೆಯೂ ಮೂಡಿದೆ. ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಹೊತ್ತು ಕ್ಲೀನ್‌ಚಿಟ್ ಪಡೆದವರಿಗೆ ವಿಶೇಷ ತನಿಖಾ ತಂಡ ಬುಲಾವ್ ನೀಡಿರುವುದು ಇದಕ್ಕೆ ಕಾರಣವಾಗಿದೆ.
ಕರ್ನಾಟಕ ಪೊಲೀಸ್, ಸಿಬಿಐ ತನಿಖೆ ಬಳಿಕವೂ ಪ್ರಕರಣದಲ್ಲಿ ಕ್ಲೀನ್‌ಚಿಟ್ ಪಡೆದುಕೊಂಡಿದ್ದ ಉದಯ್ ಕುಮಾರ್ ಜೈನ್, ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್ ನೀಡಿದೆ. ಈ ಪೈಕಿ ಉದಯ್ ಕುಮಾರ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.
ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿನ ಮೇರೆಗೆ ಅಥವಾ ಚಿನ್ನಯ್ಯ ನೀಡಿದ ಕೇಳಿಕೆಯ ಕಾರಣದಿಂದಲೂ ನನ್ನನ್ನ ಎಸ್‌ಐಟಿ ಕರೆದಿರಬಹುದು. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದು ಉದಯ್ ಕುಮಾರ್ ಜೈನ್ ಹೇಳಿದ್ದಾರೆ. ಇದು ಬುರುಡೆ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ಇರಬಹುದು. ಒಂದು ವಿಡಿಯೋದಲ್ಲಿ ಸೌಜನ್ಯಾ ಕೊಲೆಯಾದ ಸಂದರ್ಭದಲ್ಲಿ ನಾನು ಇರಲಿಲ್ಲ ಅಂತ ಹೇಳಿದ್ದಾರೆ. ಮತ್ತೊಂದು ವಿಡಿಯೋನಲ್ಲಿ ನಾನೇ ಆಕೆಯನ್ನ ಹೊತ್ಕೊಂಡು ಹೋಗೋದು ನೋಡಿದ್ದೇನೆ ಅಂತ ಹೇಳಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿದ್ದಾರೆ. ಈಗ ಸೌಜನ್ಯಾ ಪ್ರಕರಣದಲ್ಲಿ ನನ್ನ ಬಗ್ಗೆ ಆರೋಪ ಮಾಡಿದ್ದಾರೆ ಎಂದು ಉದಯಕುಮಾರ್ ಜೈನ್ ತಿಳಿಸಿದ್ದಾರೆ.
ಈಗಾಗಲೇ ಗುಂಡಿ ತೋಡಿಯಾಗಿದೆ, ಈಗ ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನು ಮತ್ತೆ ಮುನ್ನಲೆಗೆ ತರುತ್ತಿದ್ದಾರೆ. ಸಿಐಡಿ, ಸಿಬಿಐ ನನ್ನನ್ನೂ ತನಿಖೆ ಮಾಡಿದೆ. ಬ್ರೈನ್ ಮ್ಯಾಪಿಂಗ್ ಕೂಡ ಮಾಡಿದ್ದಾರೆ, ಇವತ್ತು ಮತ್ತೆ ಎಸ್‌ಐಟಿಗೆ ಕರೆದಿದ್ದಾರೆ. ನಾವು ಯಾವುದೇ ವಿಚಾರಣೆಗೂ ಸಿದ್ಧ ಎಂದು ಉದಯ್ ಕುಮಾರ್ ಜೈನ್ ಹೇಳಿದ್ದಾರೆ.
ಸೌಜನ್ಯಾ ಸತ್ತು ಒಂದು ವರ್ಷದ ನಂತರ ನಮ್ಮ ಹೆಸರು ಸೇರಿಸುವ ಕುತಂತ್ರ ನಡೆಯಿತು. ಆದರೆ ಲೋಕಲ್ ಪೊಲೀಸರ ತನಿಖೆ ವೇಳೆ ಎಫ್‌ಐಆರ್‌ನಲ್ಲಿ ನನ್ನ ಹೆಸರೇ ಇರಲಿಲ್ಲ. ಸರ್ಕಾರಿ ವಕೀಲರನ್ನು ಕ್ಯಾಚ್ ಮಾಡಿ ಕುತಂತ್ರ ನಡೆಸಿದರು. ಈಗ ನಮ್ಮನ್ನೆಲ್ಲಾ ದಿಕ್ಕಾಪಾಲು ಮಾಡಿ ಸೌಜ್ಯ ತಾಯಿ ದೊಡ್ಡ ಮನೆಯಲ್ಲಿ ಆರಾಮಾಗಿದ್ದಾರೆ. ಅವರ ಮನೆ ಮೇಲೂ ಇ.ಡಿ ರೈಡ್ ಆಗಬೇಕು ಎಂದು ಹೇಳಿದ್ದಾರೆ.
























