ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ್ ಅವರು ಜೈಲಿನಲ್ಲಿ ಕನಿಷ್ಟ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ವಕೀಲರು ನ್ಯಾಯಾಲಯದ ಮುಂದೆ ದೂರಿದ್ದಾರೆ.
ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಖೈದಿಗೆ ನೀಡಲಾಗುವ ಸಾಮಾನ್ಯ ಸೌಲಭ್ಯಗಳನ್ನು ನೀಡದೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾನೂನು ಪ್ರಕಾರ ಈ ಸೌಲಭ್ಯಗಳನ್ನು ನಿರಾಕರಿಸುವ ಹಕ್ಕು ಅಧಿಕಾರಿಗಳಿಗೆ ಇಲ್ಲ ಎಂದು ಹೇಳಿದ್ದಾರೆ.
ದರ್ಶನ್ ಧರಿಸಿದ ಶೂ ಬಿಚ್ಚಿಸುತ್ತಾರೆ. ಆಹಾರದ ತಟ್ಟೆಯನ್ನು ಎಸೆದು ಹೋಗುತ್ತಾರೆ. ಈ ಬಗ್ಗೆ ಜೈಲಧಿಕಾರಿಗಳಿಗೆ ಮೌಖಿಕ ಮನವಿ ಸಲ್ಲಿಸಿದರೆ ಅದನ್ನು ಅವರು ನಿರ್ಲಕ್ಷ್ಯ ಮಾಡುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದು, ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಹಾಸಿಗೆ, ದಿಂಬು ಒದಗಿಸಲು ಅವಕಾಶ ಇಲ್ಲ. ಖೈದಿಯನ್ನು ಅಗತ್ಯ ಬಿದ್ದಲ್ಲಿ ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಆಡಳಿತಾತ್ಮಕ ಹಕ್ಕು ಜೈಲಧಿಕಾರಿಗಳಿಗೆ ಇದೆ ಎಂದು ವಿವರಿಸಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ್ದರೂ, ಸ್ಥಳಾಂತರದ ಆದೇಶ ನೀಡಿಲ್ಲ. ಬೆಂಗಳೂರು ಮತ್ತು ಬಳ್ಳಾರಿ ನಡುವೆ ಆಂತರ ಹೆಚ್ಚಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಸೂಕ್ತ ಅಲ್ಲ. ಆರೋಪಿಯ ಜೊತೆ ವಕೀಲರು ನೇರವಾಗಿ ಮಾತನಾಡುವ ಅಗತ್ಯತೆ ಇದೆ ಎಂದಿದ್ದಾರೆ.
ಈ ಪ್ರಕರಣದ ತೀರ್ಪನ್ನು ಬುಧವಾರ ಸಂಜೆಗೆ ನ್ಯಾಯಾಲಯ ಕಾಯ್ದಿರಿಸಿದೆ.
























