ಒಂದೂವರೆ ವರ್ಷದ ಮಗುವನ್ನು ನೇಣಿಗೆ ಹಾಕಿ ಪಕ್ಕದಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಗಂಡನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಲ್ಲಿ ಎಸಗಿದ ಕೃತ್ಯ

ಉಡುಪಿ: ಮಹಿಳೆಯೊಬ್ಬರು ಒಂದೂವರೆ ವರ್ಷ ಪ್ರಾಯದ ಮಗುವನ್ನು ನೇಣಿಗೆ ಹಾಕಿ ಸಾಯಿಸಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಸೋಮವಾರ ಉಡುಪಿ ಸಮೀಪ ಬ್ರಹ್ಮಾವರದಲ್ಲಿ ಸಂಭವಿಸಿದೆ. ಗಲಾಟೆ ಪ್ರಕರಣವೊಂದರಲ್ಲಿ ಪತಿಯ ಬಂಧನಕ್ಕೆ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಬ್ರಹ್ಮಾವರದ ಹೇರಂಜೆ ಸಮೀಪ ಆರೂರಿನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯನ್ನು ಸುಶ್ಮಿತಾ (23) ಎಂದು ಗುರುತಿಸಲಾಗಿದೆ. ಮನೆಯ ಚಾವಡಿಯಲ್ಲೇ ಹೆಣ್ಣು ಮಗುವಿಗೆ ನೇಣು ಹಾಕಿ ಪಕ್ಕದಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.





















































 
 

16 ವರ್ಷದ ಹಿಂದೆ ಸುಶ್ಮಿತಾರ ಗಂಡ ಸುಭಾಶ್‌ ನಾಯ್ಕ್‌ ಮತ್ತು ಪಕ್ಕದ ಮನೆಯವರಿಗೆ ಯಾವುದೋ ವಿಚಾರಕ್ಕೆ ಜಗಳವಾಗಿ ಸುಭಾಶ್‌ ನಾಯ್ಕ್‌ ವಿರುದ್ಧ ಕೊಲೆಯತ್ನದ ಕೇಸ್‌ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಸುದೀರ್ಘ ಕಾಲ ನ್ಯಾಯಾಲಯದಲ್ಲಿ ನಡೆದು ನ್ಯಾಯಾಲಯ ಇತ್ತೀಚೆಗೆ ಸುಭಾಶ್‌ ಸಹಿತ ಆರು ಮಂದಿಯ ಬಂಧನಕ್ಕೆ ಆದೇಶಿಸಿತ್ತು.

ಆ ಬಳಿಕ ಪೊಲೀಸರು ಬಂಧನ ವಾರಂಟ್‌ ಹಿಡಿದುಕೊಂಡು ಆಗಾಗ ಮನೆಗೆ ಬಂದು ಸುಭಾಶ್‌ ಎಲ್ಲಿ ಎಂದು ಕೇಳುತ್ತಿದ್ದರು. ಸೋಮವಾರ ಬೆಳಗ್ಗೆಯೂ ಮನೆಗೆ ಬಂದು ಗಂಡ ಎಲ್ಲಿ ಎಂದು ಕೇಳಿ ಬೆದರಿಸಿದ್ದರು ಎಂದು ಆರೋಪಿಸಲಾಗಿದೆ. ಈ ಸಂದರ್ಭ ಸುಭಾಶ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರವಾಗಿ ಬೆಂಗಳೂರಿಗೆ ಹೋಗಿದ್ದರು.

ಪೊಲೀಸರು ಬಂದು ಹೋದ ಬಳಿಕ ಸುಷ್ಮಿತಾ ಸಂಬಂಧಿಕರಿಗೆ ಕರೆ ಮಾಡಿ ಪೊಲೀಸರು ಬಂದು ಹೋದ ವಿಚಾರ ತಿಳಿಸಿ ಬಂಧಿಸಿದರೆ ಬಿಡಿಸಿಕೊಂಡು ಬರಲು ಹಣವೂ ಇಲ್ಲ ಎಂದು ನೋವು ತೋಡಿಕೊಂಡಿದ್ದರು. ಅನಂತರ ಸಂಬಂಧಿಕರು ಮನೆಗೆ ಬರುವಷ್ಟರಲ್ಲಿ ಮಗುವನ್ನು ಸಾಯಿಸಿ ನೇಣಿಗೆ ಶರಣಾಗಿದ್ದರು. ಈ ಘಟನೆ ಪರಿಸರದ ಜನರ ಹೃದಯ ಕರಗುವಂತೆ ಮಾಡಿದೆ. ಮನೆಯಲ್ಲಿ ನೂರಾರು ಜನರು ಸೇರಿದ್ದು, ಮಗುವಿನ ದೇಹವನ್ನು ಇಳಿಸಿ ಪೋಸ್ಟ್‌ಮಾರ್ಟಂಗೆ ಕೊಂಡೊಯ್ಯುವಾಗ ದುಃಖ ಕಟ್ಟೆಯೊಡೆದಿತ್ತು.

error: Content is protected !!
Scroll to Top