ಸೆ.5: ಪುತ್ತೂರಿನಲ್ಲಿ 33ನೇ ವರ್ಷದ ಮಿಲಾದ್ ಸಮಾವೇಶ ಹಾಗೂ ನಾತೇ ಶರೀಫ್

ಪುತ್ತೂರು: ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ತಾಲೂಕು ಈದ್ ಮಿಲಾದ್ ಸಮಿತಿಯ ನೇತೃತ್ವದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ)ಅವರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ 33ನೇ ವರ್ಷದ ಮೀಲಾದ್ ಸಮಾವೇಶ ಹಾಗೂ ನಾತೇ ಶರೀಫ್ ಕಾರ್ಯಕ್ರಮ ಸೆ.5ರಂದು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ತಿಳಿಸಿದ್ದಾರೆ.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದ ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ದರ್ಬೆ ಪ್ರವಾಸಿ ಮಂದಿರದ ಬಳಿಯಿಂದ ಕಿಲ್ಲೆ ಮೈದಾನದ ತನಕ ಕಾಲ್ನಡಿಗೆ ಜಾಥಾ ನಡೆಯಲಿದೆ. ಜಾಥಾದಲ್ಲಿ ವಿವಿದ ತಂಡಗಳಿಂದ ದಫ್  ಹಾಗೂ ಇಸ್ಲಾಮಿಕ್ ಕಲಾ ಸಾಹಿತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಾಥಾವನ್ನು ಉದ್ಯಮಿ ಖಲಂದರ್ ಈಸ್ಟರ್ನ್ ಉದ್ಘಾಟಿಸಲಿದ್ದಾರೆ. ಉದ್ಯಮಿ ಜುನೈದ್ ಬಿಜಿ ಧ್ವಜ ಸ್ವೀಕಾರ ಮಾಡಲಿದ್ದಾರೆ. ಆಸಿಫ್ ಪರ್ಲಡ್ಕ ಮತ್ತು ಹಾಜಿ ರಫೀಕ್ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ. ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಕೆ. ಸಿನಾನ್ ಸಖಾಫಿ ಅಜಿಲಮೊಗರು ಉದ್ಘಾಟಿಸಲಿದ್ದಾರೆ. ಸೈಯದ್ ಅಲಿ ಮನ್ನಾನಿ ಪ್ರಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯರಾದ ಹಾಜಿ ಪಿ.ಎ. ಉಸ್ಮಾನ್ ಚೆನ್ನಾರ್ ಸಂಪ್ಯ, ಹಾಜಿ ಎಲ್.ಟಿ. ಅಬ್ದುಲ್ ರಝಾಕ್ ಮತ್ತು ಹಾಜಿ ಇಬ್ರಾಹಿಂ ಸಾಗರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.





















































 
 

ಈದ್ ಮೀಲಾದ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಸೆ.3ರಂದು ಬೆಳಗ್ಗೆ ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನ ಸಹಭಾಗಿತ್ವದಲ್ಲಿ ಮುರ ಎಂಪಿಎಂ ವಿದ್ಯಾಲಯ ಸಭಾಂಗಣದಲ್ಲಿ ರಕ್ತದಾನ ಮತ್ತು ರಕ್ತ ವರ್ಗೀಕರಣ ಶಿಬಿರ ನಡೆಯಲಿದೆ.ಸೆ.4ರಂದು ಬೆಳಗ್ಗೆ ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ರಾಜ್ಯ ಸಂಚಾಲಕ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ನೌಶಾದ್ ಹಾಜಿ ಬೊಳುವಾರು, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಕೋಶಾಧಿಕಾರಿ ಹನೀಫ್ ಬಗ್ಗುಮೂಲೆ ಉಪಸ್ಥಿತರಿದ್ದರು.

error: Content is protected !!
Scroll to Top