ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯ 4.5 ಲ.ರೂ. ಮೌಲ್ಯದ ಚಿನ್ನಾಭರಣ ಕಳವು

ಸಿಬ್ಬಂದಿಯ ಮೇಲೆ ಅನುಮಾನ, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು ಬೆಲೆಬಾಳುವ ಚಿನ್ನಾಭರಣ ಕಳವುಗೈದಿರುವ ಆರೋಪದಲ್ಲಿ ನಾಲ್ಕು ಮಂದಿ ಸಿಬ್ಬಂದಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ‌. ವಶಕ್ಕೆ ಪಡೆದುಕೊಂಡವರು ವಿಮಾನ‌ ನಿಲ್ದಾಣದಲ್ಲಿ ಲಗೇಜ್ ಲೋಡ್- ಅನ್‌ಲೋಡ್ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

ಸಿಆರ್‌ಪಿಎಫ್ ಜವಾನ ಹರಿಕೇಶ್ ಎಂಬವರ ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಸಂಬಂಧಿಕರ ಮದುವೆಗಾಗಿ ಶನಿವಾರ ಬೆಳಗ್ಗೆ 8.45ರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬೆಂಗಳೂರಿನಿಂದ ಹೊರಟು ಬೆಳಗ್ಗೆ 9.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.





















































 
 

ವಿಮಾನ ನಿಲ್ದಾಣದ ಹೊರಗೆ ಬಂದು ಲಗೇಜ್ ಟ್ರಾಲಿ ಬ್ಯಾಗ್ ನೋಡಿದಾಗ ಅದರ ಲಾಕ್ತೆರೆದಿರುವುದು ಕಂಡುಬಂದಿದೆ. ಬ್ಯಾಗ್ ಪರಿಶೀಲಿಸಿದಾಗ 56 ಗ್ರಾಂ ತೂಕದ ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್‌ ಕಳವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಅವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಲ್ಲಿನ ಲೋಡ್-ಅನ್‌ಲೋಡ್ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌ ಎನ್ನಲಾಗಿದೆ. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಮಾಹಿತಿ ತಿಳಿದು ಬಂದಿದೆ.

error: Content is protected !!
Scroll to Top