ಪಬ್, ಡಿಜೆ ನಡುರಾತ್ರಿವರೆಗೆ ನಡೆಯುತ್ತದೆ, ಕಲೆಗೆ ಏಕಿಲ್ಲ ಅವಕಾಶ ಎಂದು ಪ್ರಶ್ನೆ
ಮಂಗಳೂರು: ಬಂಟ್ವಾಳದ ಪಾಣೆಮಂಗಳೂರು ಸಮೀಪದ ಸಜೀಪಮುನ್ನೂರು ಎಂಬಲ್ಲಿ ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ಅರ್ಧದಲ್ಲಿಯೇ ನಿಲ್ಲಿಸಿದ ಕ್ರಮಕ್ಕೆ ಕರಾವಳಿಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ನಿಯಮದ ನೆಪದಲ್ಲಿ ಯಕ್ಷಗಾನ, ನಾಟಕ ಮತ್ತಿತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವ ಘಟನೆಗಳು ಕರವಾಳಿಯಲ್ಲಿ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಯಕ್ಷಗಾನ ಮತ್ತು ನಾಟಕ ಪ್ರದರ್ಶನಗಳನ್ನು ಅರ್ಧದಲ್ಲಿಯೇ ಪೊಲೀಸರು ನಿಲ್ಲಿಸಿದ ಬಗ್ಗೆ ವರದಿಯಾಗಿದ್ದು, ಸಂಘಟಕರು, ಕಲಾವಿದರು ಕಳವಳ ವ್ಯಕ್ತಪಡಿಸಿದ್ದಾರೆ.
ಗಣೇಶೋತ್ಸವದ ಪ್ರಯುಕ್ತ ಸಜೀಪಮುನ್ನೂರಿನಲ್ಲಿ ‘ವಿನಾಯಕ ಶಂಕರನಾರಾಯಣ ದುರ್ಗಾಂಬಾ ಯಕ್ಷಗಾನ ತಂಡ ನಂದಾವರ’ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ರಾತ್ರಿ 10 ಗಂಟೆ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರು ಪ್ರದರ್ಶನವನ್ನು ಮೊಟಕುಗೊಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕರ್ನಾಟಕ ಸರ್ಕಾರ ನೂರಾರು ವರ್ಷಗಳ ಹಳೆಯ ಸಾಂಸ್ಕೃತಿಕ ಕಲೆ ಯಕ್ಷಗಾನವನ್ನು ಮೊಟಕುಗೊಳಿಸುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಡಿಜೆ, ಪಬ್ ಇತ್ಯಾದಿಗಳನ್ನು ತಡರಾತ್ರಿವರೆಗೂ ನಡೆಸಲು ಅವಕಾಶವಿದೆ. ಆದರೆ ಪೊಲೀಸರು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಡೆಯೊಡುತ್ತಿದ್ದಾರೆ. ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕು ಎಂಬುದಕ್ಕೆ ಇದು ಮತ್ತೊಂದು ಕಾರಣ. ನಮ್ಮ ದೇಶಿ ಸಂಸ್ಕೃತಿ ಮತ್ತು ಭಾಷೆಯನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಟಕ ಕಲಾವಿದ ದೇವದಾಸ್ ಕಾಪಿಕಾಡ್ ಅವರ ಕಾರ್ಯಕ್ರಮವೊಂದನ್ನು ಇದೇ ರೀತಿ ಅರ್ಧದಲ್ಲಿ ನಿಲ್ಲಿಸಲು ಮುಂದಾದ ಘಟನೆ ಇತ್ತೀಚೆಗೆ ನಡೆದಿತ್ತು. ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಅವರು, ಕಾನೂನಿನ ಬಗ್ಗೆ ನಮಗೆ ಗೌರವ ಇದೆ. ಆದರೆ ನಮ್ಮಂತಹ ಬಡ ಕಲಾವಿದರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡಬಾರದು. ನಮ್ಮ ನಾಟಕ ಅಥವಾ ಯಕ್ಷಗಾನಗಳಿಂದಾಗಿ ಜಿಲ್ಲೆಯಲ್ಲಿ ಶಾಂತಿ ಕದಡಿದ ಅಥವಾ ಗಲಾಟೆ, ಗಲಭೆಗಳಾದ ಯಾವುದೇ ಉದಾಹರಣೆ ಇಲ್ಲ. 38 ವರ್ಷದ ನನ್ನ ರಂಗಭೂಮಿ ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ನನ್ನ ಪ್ರದರ್ಶನ ಸ್ಥಗಿತಗೊಳಿಸಿರುವುದು ಬೇಸರ ತಂದಿದೆ. ಸರ್ಕಾರ ನಾಟಕ ಮತ್ತು ಯಕ್ಷಗಾನ ಕಲಾವಿದರ ಅಳಲನ್ನು ಕೇಳಬೇಕು ಎಂದು ಮನವಿ ಮಾಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ನಾಟಕ, ಯಕ್ಷಗಾನ ಮತ್ತು ಇತರ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಂಬಂಧಪಟ್ಟ ವಿಚಾರವಾಗಿ ಇತ್ತೀಚೆಗೆ ನಡೆದ ವಿಧಾನಸಬೆ ಕಲಾಪದಲ್ಲೂ ಚರ್ಚೆಯಾಗಿತ್ತು. ಯಕ್ಷಗಾನ, ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ವಲ್ಪ ವಿನಾಯಿತಿ ನೀಡಿ ಕಲಾವಿದರಿಗೆ ನೆರವಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಹಾಗೂ ಇತರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸ್ಪೀಕರ್ ಯುಟಿ ಖಾದರ್ ಕೂಡ, ಕಾನೂನು ಮತ್ತು ಸಂಪ್ರದಾಯ ಎಂಬುದು ಬಂದಾಗ ಸಂಪ್ರದಾಯದ ವಿಚಾರದಲ್ಲಿ ಕೆಲವು ಸಡಿಲಿಕೆಗಳನ್ನು ನೀಡಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ನ ಕೆಲವು ಶಾಸಕರಿಂದ ಇದಕ್ಕೆ ತೀವ್ರ ಆಕ್ಷೇಪ ಕೂಡ ವ್ಯಕ್ತವಾಗಿತ್ತು.
























