ಅಣ್ಣನೇ ಎಸಗಿದನೆ ಈ ದುಷ್ಕೃತ್ಯ?
ಬೆಂಗಳೂರು: ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ. 14 ವರ್ಷದ ಬಾಲಕಿ ಹೊಟ್ಟೆನೋವೆಂದು ಕೆಲದಿನಗಳಿಂದ ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದಳು. ಎರಡು ದಿನಗಳ ಬಳಿಕ ಬಾಲಕಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಕೂಡಲೇ ತಂದೆ ತಾಯಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವಧಿ ಪೂರ್ವವಾಗಿ ಏಳು ತಿಂಗಳಲ್ಲೇ ಹೆರಿಗೆಯಾಗಿದ್ದು, ಸದ್ಯ ತಾಯಿ ಮತ್ತು ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ತನ್ನ ಅಣ್ಣನಿಂದಲೇ ಅತ್ಯಾಚಾರಕ್ಕೊಳಗಾಗಿ ಬಾಲಕಿ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ತಾಯಿ ಬಳಿ ಬಾಲಕಿ ಈ ವಿಚಾರ ಹೇಳಿಕೊಂಡಿದ್ದಾಳೆ. ಕೂಲಿ ಕಾರ್ಮಿಕರಾದ ಈ ದಂಪತಿಗೆ ಓರ್ವ ಪುತ್ರ ಮೂವರು ಹೆಣ್ಣು ಮಕ್ಕಳಿದ್ದಾರೆ. ಎರಡನೇ ಮಗಳ ಮೇಲೆ ಹಿರಿಯ ಮಗ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೆಲದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಶಹಾಪುರದ ವಸತಿ ಶಾಲೆಯೊಂದರಲ್ಲಿ 9ನೇ ತರಗತಿ ಬಾಲಕಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ 30 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
























