ಜಯಂತ್ ಟಿ. ಮನೆಯಲ್ಲಿ ಎಸ್‌ಐಟಿ ಶೋಧ ವೇಳೆ ಬಯಲಾಯಿತು ಹಲವು ರಹಸ್ಯ
ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಮಾಸ್ಕ್‌ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆ ದಿಲ್ಲಿವರೆಗೂ ಪ್ರಯಾಣಿಸಿತ್ತು ಎಂಬುದು ಈಗ ದೃಢಪಟ್ಟಿದೆ. ಸ್ವತಹ ಜಯಂತ್ ಟಿ. ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿರುವ ಜಯಂತ್ ಟಿ. ಅವರ ಬಾಡಿಗೆ ಮನೆಗೆ ಎಸ್‌ಐಟಿ ತಂಡ ಚಿನ್ನಯ್ಯನನ್ನು ಕರೆದುಕೊಂಡು ಹೋಗಿ ಶೋಧ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ದಾಳಿಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿರುವ ಜಯಂತ್ ಟಿ., ಸುಜಾತ ಭಟ್ ಮತ್ತು ಚಿನ್ನಯ್ಯ ಕಾರಿನಲ್ಲಿ ತಲೆಬುರುಡೆಯೊಂದಿಗೆ ದಿಲ್ಲಿ ತನಕ ತಾನು ಹೋಗಿರುವುದು ನಿಜ. ಅಲ್ಲಿ ಕೆಲವು ವ್ಯಕ್ತಿಗಳನ್ನು ಭೇಟಿ ಮಾಡಿದ್ದೇವೆ. ಇದಕ್ಕೂ ಮೊದಲು ದಿಲ್ಲಿಯಲ್ಲಿ ಓರ್ವ ಸ್ವಾಮೀಜಿಯನ್ನೂ ಭೇಟಿಯಾಗಿದ್ದೆವು. ಈ ಕುರಿತು ಚಿನ್ನಯ್ಯ ನೀಡಿರುವ ಮಾಹಿತಿ ಆಧಾರದಲ್ಲಿ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿರಬಹುದು ಎಂದಿದ್ದಾರೆ.
ಜಯಂತ್ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಆರು ತಾಸಿಗೂ ಅಧಿಕ ಕಾಲ ಶೋಧ ನಡೆಸಿದ್ದಾರೆ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಬಾಗಲಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯ ಮಿನಿ ಕಾಲನಿಯಲ್ಲಿರುವ ಮನೆಗೆ ಜಯಂತ್ ಜೊತೆಗೆ ಎಂಟು ಅಧಿಕಾರಿಗಳು ತೆರಳಿ ಇಡೀ ಮನೆಯನ್ನು ಶೋಧಿಸಿ ಜಯಂತ್ ಪತ್ನಿ ಮತ್ತು ಮಕ್ಕಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಚಿನ್ನಯ್ಯನ ಪರಿಚಯ ನಾಲ್ಕು ತಿಂಗಳ ಹಿಂದೆಯಷ್ಟೇ ಆಗಿದೆ. ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೆಲವು ದಿನ ಅವನಿಗೆ ಆಶ್ರಯ ನೀಡಿದ್ದೆ ಹಾಗೂ ಊಟ ತಿಂಡಿಯ ವ್ಯವಸ್ಥೆ ಮಾಡಿದ್ದೆ. ಮೊದಲ ಸಲ ಮೂರು ದಿನ ಇದ್ದ ಚಿನ್ನಯ್ಯ ಇನ್ನೊಂದು ಸಲ ಬಂದು ಕೆಲವು ದಿನ ತಂಗಿದ್ದ ಎಂದು ಜಯಂತ್ ಟಿ. ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ನೇರವಾಗಿ ಒಳಗೊಂಡಿರುವ ಜಯಂಟ್ ಟಿ. ಹೇಳಿಕೆ ಈ ಪ್ರಕರಣದಲ್ಲಿ ದೊಡ್ಡಮಟ್ಟದ ಷಡ್ಯಂತ್ರ ನಡೆದಿದೆ ಎಂಬ ಆರೋಪವನ್ನು ಪುಷ್ಟೀಕರಿಸಿದೆ.
ಗಾಂಜಾ ಮಾರುತ್ತಿದ್ದ ಚಿನ್ನಯ್ಯ
ಈ ನಡುವೆ ಎಸ್‌ಐಟಿ ದಾಳಿಯಾದ ಬಳಿಕ ಜಯಂತ್ ಟಿ. ಮನೆಯ ಸಮೀಪದ ಮನೆಯ ಮಹಾಲಕ್ಷ್ಮೀ ಎಂಬ ಮಹಿಳೆ ಮಾಧ್ಯಮದವರ ಜೊತೆ ಮಾತನಾಡಿ ಆ ಮನೆಯಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಟಿವಿಯಲ್ಲಿ ನೋಡಿದಾಗ ಜಯಂತ್ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿ ಚಿನ್ನಯ್ಯ ಎನ್ನುವುದು ತಿಳಿಯಿತು. ಜಯಂತ್ ಮನೆಯಲ್ಲಿ ಚಿನ್ನಯ್ಯ ಇದ್ದದ್ದು ನಿಜ. ನಾನು ಕೂಡ ಅದೇ ಕಟ್ಟಡದ ಬಾಡಿಗೆ ಮನೆಯಲ್ಲಿದ್ದೆ. ಆಗ ಜಯಂತ್ ಮನೆಗೆ ಅನೇಕ ಮಂದಿ ಬಂದು ಹೋಗುತ್ತಿರುವುದನ್ನು ನೋಡಿದ್ದೇನೆ ಎಂದು ಮಹಾಲಕ್ಷ್ಮೀ ತಿಳಿಸಿದ್ದಾರೆ.
ಜಯಂತ್ ಮನೆಯಲ್ಲಿ ಗಾಂಜಾ ಮಾರುತ್ತಿದ್ದ ಅನುಮಾನ ಇತ್ತು. ಈ ಕುರಿತು ಪೊಲೀಸರಿಗೂ ದೂರು ಕೊಟ್ಟಿದ್ದೆ. ಈ ವಿಚಾರವಾಗಿ ನಮಗೂ ಜಯಂತ್‌ಗೂ ಆಗಾಗ ಜಗಳವಾಗುತ್ತಿತ್ತು. ಕೊನೆಗೆ ಬೇಸತ್ತು ನಾವೇ ಅಲ್ಲಿಂದ ಬೇರೆ ಕಡೆ ಹೋದೆವು. ಗಾಂಜಾ ಮಾರಾಟದ ಬಗ್ಗೆ ಮನೆ ಮಾಲಕರಿಗೂ ತಿಳಿಸಿದ್ದೆವು. ಆದರೆ ಪೊಲೀಸರಾಗಲಿ ಮಾಲಕರಾಗಲಿ ಕ್ರಮ ಕೈಗೊಳ್ಳಲಿಲ್ಲ ಎಂದು ಮಹಾಲಕ್ಷ್ಮೀ ಹೇಳಿಕೊಂಡಿದ್ದಾರೆ.
























