ಎಸ್‌ಐಟಿ ಮುಂದೆ ಸುದೀರ್ಘ ವಿಚಾರಣೆಗೆ ಹಾಜರಾದ ಮಟ್ಟಣ್ಣವರ್
ಬೆಳ್ತಂಗಡಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಿರೀಶ್ ಮಟ್ಟಣ್ಣನವರ್ ಅವರನ್ನು ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ವಿಚಾರಣೆ ಮುಗಿಸಿದ ಬಳಿಕ ಎಸ್‌ಐಟಿ ಕಚೇರಿಯಿಂದ ಹೊರಬಂದ ಅವರು ಮಾಧ್ಯಮದವರ ಜೊತೆ ಮಾತನಾಡಿ ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುತ್ತಿದ್ದಂತೆಯೇ ಎದೆ ಢವ ಢವ ಅಂತಾ ಬಡಿಕೊಳ್ಳಲು ಪ್ರಾರಂಭಿಸಿತು. ಜಗತ್ತಿನಲ್ಲಿ ಎಷ್ಟು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳಿವೆ ಎಂದು ಕೇಳಿದರು. ನಂತರ ಯಾವ ಯಾವ ಪಾದ್ರಿ, ಮೌಲಿ, ಶೇಟ್‌ಗಳಿಂದ ದೇವಸ್ಥಾನ ಹಾಳು ಮಾಡಲು ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂದು ಕೇಳಿದರು. ಅದನ್ನು ಪೂರ್ತಿಯಾಗಿ ಹೇಳಿದ್ದೇನೆ ಎಂದಿರುವ ವಿಡಿಯೋ ವೈರಲ್ ಆಗಿದೆ.
ಯಾವ ಶೋ ರೂಂನಿಂದ ಬುರುಡೆ ತಂದಿದ್ದೀರಿ. ಅದಕ್ಕೆ ಯಾವ ಕಾರ್ಪೆಂಟರ್ ಬಣ್ಣ ಹಚ್ಚಿದ್ದಾರೆ ಎಂದು ಕೇಳಿದರು. ಅವರ ನಂಬರ್ ಕೂಡ ಕೊಟ್ಟು ಬಂದಿದ್ದೇನೆ. ಬುರುಡೆ ಆಗಲಿ, ಏನೇ ಆಗಲಿ ಪ್ರತಿಯೊಂದಕ್ಕೂ ಸ್ಪಷ್ಟನೆ ನೀಡಿ ಬಂದಿದ್ದೇನೆ ಎಂದು ಮಟ್ಟಣ್ಣವರ್ ಹೇಳಿದ್ದಾರೆ.
ಪ್ರಕರಣದಲ್ಲಿ ನಾವು ಯಾವುದೇ ಸುಳ್ಳು ಹೇಳಿಲ್ಲ. ಎಲ್ಲದ್ದಕ್ಕೂ ಸ್ಪಷ್ಟನೆ ನೀಡಿದ್ದೇನೆ. ಹೆಣ ಹೂತಿದ್ದ ಅಕ್ರಮ ಮತ್ತು ಧರ್ಮಸ್ಥಳ ಪಂಚಾಯತ್ ದಾಖಲೆಯಲ್ಲಿರುವ ಫೋರ್ಜರಿ ಕುರಿತು ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿದ್ದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ. ಈ ವಿಡಿಯೋವನ್ನು ವಕೀಲ ಜಗದೀಶ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೂಡಿದ ಬುರುಡೆ ಗ್ಯಾಂಗ್‌ನ ಗಿರೀಶ್ ಮಟ್ಟಣ್ಣನವರ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ಮದುವೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆಯಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿಯಾಗಿ ವಿಡಿಯೋ ಸಹಿತ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತಂದಿದ್ದು, ಧರ್ಮಸ್ಥಳ ಭಕ್ತರ ಬಗ್ಗೆ ಹೀನವಾಗಿ ಮಾತಾಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಲಾಗಿದೆ. ದೂರು ಸ್ವೀಕರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಚೌಧರಿ, ಹೆಣ್ಣು ಮಕ್ಕಳ ಚಾರಿತ್ರಿಕ ವಧೆ ಮಾಡಿದರೆ ಪೊಲೀಸ್ ಆಯುಕ್ತರಿಗೆ ಎಫ್‌ಐಆರ್ ಮಾಡಲು ಸೂಚಿಸುತ್ತೇನೆ ಎಂದಿದ್ದಾರೆ.
ಸುಮೋಟೊ ಕೇಸ್ ದಾಖಲಾಗಲಿ-ಸದಾನಂದ ಗೌಡ
ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ಪ್ರಕರಣವನ್ನು ಎನ್ಐಎ ಸೂಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲು ಅವಕಾಶ ಇದೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ. ಧರ್ಮಸ್ಥಳ ವಿರುದ್ಧ ಭವಿಷ್ಯದಲ್ಲಿ ಇಂಥ ಅಪಪ್ರಚಾರ, ಪಿತೂರಿಗಳಿಗೆ ಫುಲ್ ಸ್ಟಾಪ್ ಹಾಕುವ ಅಗತ್ಯ ಇದೆ. ಇದು ಎಸ್ಐಟಿಯಿಂದ ಸಾಧ್ಯವಿಲ್ಲ, ಎನ್ಐಎ ತನಿಖೆ ನಡೆದರೆ ಮಾತ್ರ ಸಾಧ್ಯ. ಎನ್ಐಎಗೆ ಸೂಮೋಟೊ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇದೆ. ಎನ್ಐಎ ಸೂಮೋಟೊ ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.
ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಎಡಪಂಥೀಯರ ಕೈವಾಡ ಇದೆ ಅನ್ನೋ ಅನುಮಾನಗಳಿವೆ. ಎಡಪಂಥೀಯರು ಈಗ ಸ್ವಲ್ಪ ಮಟ್ಟಿಗೆ ಇರುವುದು ಕೇರಳದಲ್ಲಿ ಹಾಗಾಗಿ ಎನ್ಐಎ ಇದನ್ನು ತೆಗೆದುಕೊಳ್ಳಲು ಸೂಕ್ತ ಕಾರಣ ಇದೆ ಎಂದು ಡಿವಿಎಸ್ ಹೇಳಿದ್ರು. ಧರ್ಮಸ್ಥಳ ವಿರುದ್ಧ ಸುದೀರ್ಘ ಅವಧಿಯಿಂದ ಷಡ್ಯಂತ್ರ ನಡೆದಿದೆ. ಹೊಸ ಹೊಸ ಪಾತ್ರಧಾರಿಗಳು ಬಂದಿದ್ದಾರೆ. ಎಡಪಂಥೀಯರ ಹೆಗಲ ಮೇಲೆ ಕೋವಿ ಇಟ್ಟು ಗುಂಡು ಹಾರಿಸುವ ಕೆಲಸ ನಡೀತಿದೆ. ಇದೆಲ್ಲ ಸಮಗ್ರವಾಗಿ ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ಈ ಪ್ರಕರಣ ಎನ್ಐಎಗೆ ಕೊಡಬೇಕು ಅನ್ನೋದು ನಮ್ಮ ಒತ್ತಾಯ ಎಂದು ಹೇಳಿದ್ದಾರೆ.
ವಿಚಾರಣೆಗೆ ಗೈರಾದ ಸಮೀರ್
ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಜೊತೆಗೆ AI ಮೂಲಕ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಿ ಜನರನ್ನು ಯಾಮಾರಿಸಿದ್ದ ಯೂಟ್ಯೂಬರ್ ಸಮೀರ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಆತ ಅನಾರೋಗ್ಯ ನೆಪ ಹೇಳಿ ಗೈರಾಗಿದ್ದಾನೆ. ಮತ್ತೊಂದು ದಿನ ವಿಚಾರಣೆಗೆ ಹಾಜರಾಗಲು ಆತನ ಪರ ವಕೀಲರು ಅನುಮತಿ ಕೇಳಿದ್ದಾರೆ. ಸಮೀರ್ ಆದಾಯ ಮೂಲ ಕೆದಕುತ್ತಿರುವ ಎಸ್‌ಐಟಿ, ಅಕೌಂಟ್ ಡಿಟೇಲ್ಸ್ ಕೆದಕಿದ್ದಾರೆ. ಒಂದು ಎಐ ವಿಡಿಯೋಗೆ ತಗಲುವ ಖರ್ಚೆಷ್ಟು? ಒಂದು ವಿಡಿಯೋ ಸಿಗೋ ಆದಾಯವೆಷ್ಟು ಅನ್ನೋ ಮಾಹಿತಿ ಕೇಳಿದ್ದಾರೆ. ಪೊಲೀಸರ ಪ್ರಶ್ನೆಗೆ ಸಮೀರ್, ಐನೂರು, 1 ಸಾವಿರ ಖರ್ಚು ಮಾಡಿ ಎಐ ವಿಡಿಯೋ ಮಾಡ್ತಿರೋದಾಗಿ ಹೇಳಿದ್ದಾನೆ. ಈ ಮಧ್ಯೆ, ಸಮೀರ್ ವಿಡಿಯೋ ಬಗ್ಗೆ ಮುಸ್ಲಿಂ ವ್ಯಕ್ತಿ, ನಾವೇ ಈ ವಿಡಿಯೋ ನಂಬಲ್ಲ. ನೀವ್ಯಾಕೆ ನಂಬುತ್ತೀರಿ ಅಂತ ಕಿಡಿ ಕಾರಿದ್ದಾರೆ.
ಬುರುಡೆ ಮ್ಯಾನ್ ಚಿನ್ನಯ್ಯ, ಆತನ ಅಣ್ಣ ತಾನಾಸಿ ಮತ್ತು ಮಗ ಪುರುಷೋತ್ತಮ್ ಕೂಡ ನಿನ್ನೆ ವಿಚಾರಣೆಗೆ ಹಾಜರಾಗಿದ್ದಾರೆ. ಹಾಗೆಯೇ ಚಿನ್ನಯ್ಯ ಮತ್ತು ಪತ್ನಿ ಮಲ್ಲಿಕಾಳ ಬ್ಯಾಂಕ್ ಅಕೌಂಟ್ ಎಸ್‌ಐಟಿ ಆಧಿಕಾರಿಗಳು ಜಾಲಾಡಿದ್ದಾರೆ.
























