ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಬಗ್ಗೆ ವಿಪಕ್ಷ ನಾಯಕ R. ಅಶೋಕ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾನು ಅವರು ಚಾಮುಂಡೇಶ್ವರಿಯನ್ನು ಆನೆಯ ಮೇಲೆ ಕೂರಿಸುವುದಕ್ಕೂ ಕ್ಯಾತೆ ತೆಗೆಯುವುದಿಲ್ಲ ಎಂದು ಏನು ಗ್ಯಾರಂಟಿ? ನವರಾತ್ರಿ ಮತ್ತು ಮಷ್ತಾಕ್‌ಗೆ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಬಾನು ಅವರ ಕೈಯಲ್ಲಿ ದಸರಾ ಉದ್ಘಾಟಿಸಬೇಕು ಎನ್ನುವ ಉಪಾಯ ಯಾರದ್ದು? ಮುಖ್ಯಮಂತ್ರಿಗಳದ್ದೋ, ಸಂಪುಟ ಸಹೋದ್ಯೋಗಿಗಳದ್ದೋ?, ಅಲ್ಲ ಧರ್ಮಸ್ಥಳ ಕ್ಷೇತ್ರದ ಹೆಸರಿಗೆ ಮಸಿ ಬಳಿಯಲು ಹೊರಟ ನಗರ ನಕ್ಸಲರದ್ದೋ? ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರೆ ಅದಕ್ಕೊಂದು ಗೌರವ ಇರುತ್ತಿತ್ತು. ನವರಾತ್ರಿಗೂ ಅವರಿಗೂ ಏನು ಸಂಬಂಧ? ಕನ್ನಡಾಂಬೆಯನ್ನು ಭುವನೇಶ್ವರಿಯ ಸ್ಥಾನದಲ್ಲಿ ಕೂರಿಸಿ ಕನ್ನಡಮ್ಮನನ್ನು ದೌರ್ಜನ್ಯ ಮಾಡುತ್ತಿದ್ದೀರಿ ಎನ್ನುವ ಮನಸ್ಥಿತಿ ಇರುವವರಿಂದ ದಸರಾ ಉದ್ಘಾಟನೆ ಮಾಡಿಸುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ನಮ್ಮ ನೆಲ, ಜಲ, ಸಂಸ್ಕೃತಿ ಬಗ್ಗೆ ಸಂವೇದನೆಯೇ ಇಲ್ಲದ ವ್ಯಕ್ತಿ ನಾಡ ಹಬ್ಬ ಉದ್ಘಾಟಿಸುವುದು ಎಷ್ಟು ಸರಿ?
ಸರ್ಕಾರ ದಸರಾ ಉದ್ಘಾಟನೆ ಮಾಡಲು ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ವಿವಾದ ಸೃಷ್ಟಿ ಮಾಡುವುದಕ್ಕಾಗಿಯೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
























