ಚಾಲಕನ ನಿರ್ಲಕ್ಷ್ಯ, ಅತಿವೇಗ ತಲಪಾಡಿಯ ಭೀಕರ ಅಪಘಾತಕ್ಕೆ ಕಾರಣ

ಗಾಯಾಳುಗಳ ಚಿಕಿತ್ಸೆಯ ಪೂರ್ತಿ ವೆಚ್ಚ ಭರಿಸುವುದಾಗಿ ಹೇಳಿದ ಕೆಎಸ್‌ಆರ್‌ಟಿಸಿ

ಮಂಗಳೂರು: ತಲಪಾಡಿಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತ ಆಘಾತದ ಅಲೆಯೆಬ್ಬಿಸಿದೆ. ಚಾಲಕನೊಬ್ಬನ ನಿರ್ಲಕ್ಷ್ಯ 6 ಮಂದಿಯ ಜೀವ ಕಸಿದಿದೆ. ಆರು ಮಂದಿ ತಮ್ಮದಲ್ಲದ ತಪ್ಪಿಗೆ ವಿನಾಕಾರಣ ಪ್ರಾಣ ತೆತ್ತಿರುವುದು ನಿಜಕ್ಕೂ ದುರಂತ. ಬಸ್‌ ಚಾಲಕನ ಅತಿವೇಗ, ಅಜಾಗರೂಕತೆ ಕಾರಣ ಎಂದು ಕೆಎಸ್‌ಆರ್‌ಟಿಸಿ ಕೂಡ ಒಪ್ಪಿಕೊಂಡಿದೆ.

ಬಸ್‌ ಚಾಲಕ ನಿಜಲಿಂಗಪ್ಪ ಚಲವಾದಿಯ ಅಜಾಗರೂಕತೆಯಿಂದ ಅಪಘಾತವಾಗಿದೆ. ಕಾಸರಗೋಡಿನಿಂದ ಮಂಗಳೂರಿಗೆ ಹೊರಟಿದ್ದ ಬಸ್‌ (ನಂ. KA19F3407) ತಲಪಾಡಿ ಟೋಲ್‌ಗಿಂತ 150 ಮೀಟರ್‌ ಹಿಂದೆಯೇ ಅಪಘಾತವಾಗಿದೆ. ಬಸ್‌ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಆಟೋವೊಂದು ಅಡ್ಡ ಬಂದಿದೆ. ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ಸಿನ ಬ್ರೇಕ್ ಹಾಕಿದ್ದಾರೆ. ಅಷ್ಟರಲ್ಲಿ ಬಸ್ ಆಟೋಗೆ ಹೊಡೆದಿದೆ. ಆ ಸಂದರ್ಭದಲ್ಲಿ ಬಸ್‌ ಡಿಕ್ಕಿಯಾಗಿ ಹಠಾತ್ತನೆ ಸ್ಪೀಡ್ ಆಗಿ ತಿರುಗಿದೆ. ಚಾಲಕರು ಚಾಲನಾ ಸೀಟಿನಿಂದ ಜಿಗಿದು ಎಸ್ಕೇಪ್‌ ಆಗಿದ್ದಾರೆ. ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ.





















































 
 

ಅಪಘಾತದಲ್ಲಿ ಮುಂದಿನಿಂದ ಡಿಕ್ಕಿ ಹೊಡೆದ ಆಟೋದಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರೂ ಮೃತಪಟ್ಟಿರುತ್ತಾರೆ.‌ ಹಿಂಬದಿಯಿಂದ ಡಿಕ್ಕಿಯಾಗಿದ್ದ ಇಬ್ಬರು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾದ ಬಸ್ಸನ್ನು 2025ರ ಆ.27ರಂದು ಮಾರ್ಗಸಂಖ್ಯೆಗೆ ನಿಯೋಜಿಸಿದ್ದು, ಅಪಘಾತ ಸಮಯದ ವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540 ಕಿ.ಮೀ ಪ್ರಯಾಣ ಮಾಡಿದೆ. ಈ ಬಸ್‌ ಆ.26ರಂದು FC ನವೀಕರಣಕ್ಕೆ ಆಗಿ ಬಂದಿದ್ದು, ಯಾವುದೇ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಲು ಸಾಧ್ಯವಿಲ್ಲ. ಚಾಲಕ ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿಯೇ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ನಿಗಮ ಭರಿಸಲಿದೆ. ನಿಗಮ ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ. ಅಪಘಾತ ತಪ್ಪಿಸಲು‌ ನಿರಂತರ ತರಬೇತಿ, ತಿಳಿವಳಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಈ‌ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ‌ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು‌ ಕಲ್ಪಿಸಲೆಂದು ನಿಗಮವು ಪ್ರಾರ್ಥಿಸುತ್ತದೆ. ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ‌‌ ಜರುಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.

error: Content is protected !!
Scroll to Top