ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ಯಾನುಭೋಗರಾಗಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಮೂರು ತಲೆಮಾರಿನ ಹೆಗ್ಗಡೆಯವರೊಂದಿಗೆ ಕಚೇರಿಯ ಲೆಕ್ಕಪತ್ರ ಮತ್ತು ಕಂದಾಯ ವಿಭಾಗದ ಕಾರ್ಯನಿರ್ವಹಣೆಯಲ್ಲಿ ಖ್ಯಾತಿ ಪಡೆದ ಕಲಾ ಪ್ರೇಮಿ ದೊಂಡೋಲೆ ಕೆ. ಸೂರ್ಯನಾರಾಯಣ ರಾವ್ 1951 ರಲ್ಲಿ ದೊಂಡೋಲೆ ಮನೆಯಲ್ಲಿ ಗಣೇಶ ಚತುರ್ಥಿಯಂದು ಶ್ರೀ ಗಣೇಶನ ಪ್ರತಿಷ್ಠೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ ಮತ್ತು ಯಕ್ಷಗಾನ ತಾಳಮದ್ದಳೆಯನ್ನು ಪ್ರಾರಂಭಿಸಿದರು.

ಆರಂಭದ ಕಾಲಘಟ್ಟದಲ್ಲಿ ಧರ್ಮಸ್ಥಳ ಪರಿಸರದ ಕಲಾವಿದರು, ಕೆಲವು ಯಕ್ಷಗಾನ ಸಂಘಗಳ ಕಲಾವಿದರು ಭಾಗವಹಿಸುತ್ತಾ ಮುಂದುವರಿದ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ತೆಂಕು-ಬಡಗುತಿಟ್ಟುಗಳ ಅನೇಕ ಪ್ರಸಿದ್ಧ ಕಲಾವಿದರ ಭಾಗವಹಿಸುವಿಕೆಯಿಂದ ಪ್ರಸಿದ್ಧಿಯನ್ನು ಪಡೆಯಿತು.

ಕೆ ಸೂರ್ಯನಾರಾಯಣರಾವ್ ಅವರ ನಂತರ 1972ರಿಂದ ಪುತ್ರರಾದ ಕೆ. ಶಂಕರರಾಮ ರಾವ್ ಮತ್ತು ಸಹೋದರರು ಚೌತಿ ಮತ್ತು ತಾಳಮದ್ದಳೆಯ ಪರಂಪರೆಯನ್ನು ಮುಂದುವರಿಸಿದರು. 2021 ರಲ್ಲಿ ವ್ಯವಸ್ಥಿತವಾಗಿ ಈ ಕಾರ್ಯಕ್ರಮಗಳನ್ನು ನಡೆಸಲು ಕಮಲಾ ಸೂರ್ಯನಾರಾಯಣ ಚಾರಿಟೇಬಲ್ ಟ್ರಸ್ಟ್ ರಚಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿ ಟ್ರಸ್ಟ್ ನ್ನು ಲೋಕಾರ್ಪಣೆಗೊಳಿಸಿದರು.
ಈ ಟ್ರಸ್ಟ್ ನ ಮೂಲಕ ಐದನೇ ವರ್ಷದ ಗಣೇಶೋತ್ಸವದ ಸನ್ಮಾನ ಸಮಾರಂಭವು ಚೌತಿ ತಾಳಮದ್ದಳೆಯ ಅಮೃತೋತ್ಸವ ಕಾರ್ಯಕ್ರಮದೊಂದಿಗೆ
ದೊಂಡೋಲೆಯಲ್ಲಿ ಆ.27ರಂದು ಜರಗಿತು.
ಯಕ್ಷಗಾನ ಕಲಾವಿದರ ಸನ್ಮಾನ, ಗೌರವಾರ್ಪಣೆ, ಕೃತಜ್ಞತೆಯ ಸಮರ್ಪಣೆ, 75 ವರ್ಷಗಳ ಅವಲೋಕನದ ಸ್ಮರಣ ಸಂಚಿಕೆ ಬಿಡುಗಡೆ, ತಾಳಮದ್ದಳೆ ಮತ್ತು ಕುಟುಂಬದ 80ಕ್ಕೂ ಮಿಕ್ಕಿದ ಕುಟುಂಬದ ಸದಸ್ಯರ ಸಮ್ಮಿಲನ, ಪ್ರೇಕ್ಷಕರ ಪಾಲ್ಗೊಳ್ಳುವಿಕೆಯಿಂದ ಯಕ್ಷಗಾನ ಸಮ್ಮೇಳನವನ್ನು ನೆನಪಿಸುವ ರೀತಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಧರ್ಮಸ್ಥಳ ಪರಿಸರದ ಅನೇಕ ಕಲಾವಿದರು ಈ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿದ್ದುದ್ದನ್ನು ನೆನಪಿಸಿಕೊಂಡು ಪ್ರಸಿದ್ಧ ಕಲಾವಿದರ ಭಾಗವಹಿಸುವಿಕೆಯಿಂದ ದೊಂಡೋಲೆ ತಾಳಮದ್ದಳೆಯು ಯಕ್ಷಗಾನ ವಲಯದಲ್ಲಿ ಜನಪ್ರಿಯತೆಯನ್ನು ಪಡೆದಿರುವುದು ಮತ್ತು ಮನೆಯ ಸದಸ್ಯರು ಹಿರಿಯರ ಆದರ್ಶವನ್ನು ಪಾಲಿಸುವ ಬದ್ಧತೆಯನ್ನು ಹೊಂದಿರುವುದು ಮಹತ್ವದ ಘಟನೆಯೊಂದು ತಿಳಿಸಿದರು. ಚೌತಿ ತಾಳಮದ್ದಳೆಯು ಶತಮಾನೋತ್ಸವವನ್ನು ಆಚರಿಸುವಂತಾಗಲಿ ಮತ್ತು ಅದರಲ್ಲಿ ಭಾಗವಹಿಸುವ ಯೋಗ ನಮಗೆಲ್ಲರಿಗೂ ಪ್ರಾಪ್ತವಾಗಲಿಯೆಂದು ಶುಭ ಹಾರೈಸಿದರು.
ಡಿ. ಹರ್ಷೇಂದ್ರ ಕುಮಾರ್ ಅವರನ್ನು ಟ್ರಸ್ಟ್ ವತಿಯಿಂದ ಕೆ. ಪುರಂದರ ರಾವ್ ಸಹೋದರರು ಗೌರವಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ : ದೊಂಡೋಲೆ ಮನೆ ಚೌತಿಯ ಅಮೃತ ಸಂಭ್ರಮ 2025 ಸ್ಮರಣ ಸಂಚಿಕೆಯನ್ನು ಬಹುಶ್ರುತ ವಿದ್ವಾಂಸ ಡಾ.ಯಂ. ಪ್ರಭಾಕರ ಜೋಶಿ ಬಿಡುಗಡೆಗೊಳಿಸಿದರು. ಗಣೇಶೋತ್ಸವದ ಹಿನ್ನೆಲೆಯ ಬಗ್ಗೆ ಮಾತನಾಡಿ ಬಾಲಗಂಗಾಧರ ತಿಲಕರಿಂದ ಸಾರ್ವತ್ರಿಕವಾಗಿ ಆಚರಿಸಲ್ಪಡುವ ಗಣೇಶೋತ್ಸವವು ಈ ಮನೆಯ ಕೌಟುಂಬಿಕ ಪರಿಸರದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಾಳ ಮದ್ದಳೆಯ ದಾಖಲೀಕರಣದ ದೃಷ್ಟಿಯಿಂದ ಈ ಸ್ಮರಣ ಸಂಚಿಕೆಯು ಮಹತ್ವದ್ದಾಗಿದ್ದು ಇದನ್ನು ಶಿಕ್ಷಣ ಸಂಸ್ಥೆಗಳಿಗೆ,ವಿಶ್ವವಿದ್ಯಾಲಯಗಳಿಗೆ ತಲುಪಿಸುವ ಮೂಲಕ ಆಸಕ್ತರಿಗೆ ಸಂಶೋಧನೆಗೆ ಬಳಸಲ್ಪಡುವಂತಾದರೆ ಉತ್ತಮವೆಂಬ ಆಶಯ ವ್ಯಕ್ತಪಡಿಸಿದರು.
ಡಾ. ಎಮ್ ಪ್ರಭಾಕರ್ ಜೋಶಿ ಅವರನ್ನು ಟ್ರಸ್ಟ್ ವತಿಯಿಂದ ಡಿ. ಹರ್ಷೇಂದ್ರ ಕುಮಾರ್ ಸನ್ಮಾನಿಸಿದರು.
ಕಲಾವಿದರ ಸನ್ಮಾನ :
ಭಾಗವತ ದಿನೇಶ ಅಮ್ಮಣ್ಣಾಯ,ಪುತ್ತಿಗೆ ರಘುರಾಮ ಹೊಳ್ಳ ಮತ್ತು ಅರ್ಥಧಾರಿ, ಸಂಘಟಕ ಉಜಿರೆ ಅಶೋಕ ಭಟ್ಟರನ್ನು ಡಿ. ಹರ್ಷೇಂದ್ರ ಕುಮಾರ್ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಉಜಿರೆ ಅಶೋಕ್ ಭಟ್ ಕೃತಜ್ಞತೆ ವ್ಯಕ್ತಪಡಿಸಿದರು. ಸುಮನ ವಸಂತ್ ವರ್ಕಾಡಿ, ನಿಧಿ ಶ್ರೀ ಹೊಳ್ಳ, ಜಯಂತಿ ಅರವಿಂದ್ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ ತಿಳಿವಳಿಕೆಯು ನಮ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ. ಆದರೆ ಅರಿವಳಿಕೆ ಎನ್ನುವ ಶಬ್ದವು ಪ್ರಜ್ಞೆ ತಪ್ಪಿಸುವಂತಹ ಕೆಲಸವನ್ನು ಮಾಡುತ್ತದೆ ಎಂಬರ್ಥದಲ್ಲಿ ಪ್ರಯೋಗವಾಗುತ್ತಿದೆ. ನಿಜವಾಗಿ ತಿಳಿವು ಮತ್ತು ಅರಿವನ್ನು ವಿಚಾರದೊಂದಿಗೆ ಆಚರಣೆ ಮಾಡಿ ತೋರಿಸುವ ಮೂಲಕ ಕಿರಿಯರಿಗೆ ಮನವರಿಕೆ ಮಾಡುವ ಪ್ರಯತ್ನವಾಗಬೇಕಾಗಿದೆ. ದೊಂಡೋಲೆ ಮನೆಯಲ್ಲಿ ಅಂತಹ ಕಾರ್ಯ ನಡೆಯುತ್ತಿದ್ದು ನಮ್ಮ ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಮತ್ತು ಕಲೆಯ ಇತಿಹಾಸವನ್ನು ಕಟ್ಟಿಕೊಡುವ ಸಾಂಸ್ಕೃತಿಕ ಉತ್ಸವವಾಗಿದೆ ಎಂದು ತಿಳಿಸಿದರು.
ಡಾ. ವಸಂತ ಭಾರದ್ವಾಜ್ ಅವರನ್ನು ಟ್ರಸ್ಟ್ ವತಿಯಿಂದ ಡಿ. ಹರ್ಷೇಂದ್ರ ಕುಮಾರ್ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು.ಕೆ.ಸೂರ್ಯನಾರಾಯಣರಾವ್ ಅವರನ್ನು ಸಭೆಗೆ ಪರಿಚಯಿಸಿದರು.
ಕಲಾವಿದರಿಗೆ ಗೌರವಾರ್ಪಣೆ ದೊಂಡೋಲೆ ತಾಳಮದ್ದಳೆಯಲ್ಲಿ ಭಾಗವಹಿಸಿದ ಹಿರಿಯ ಅರ್ಥಧಾರಿಗಳಾದ ಭಾಸ್ಕರ್ ರಾವ್ ಕುಕ್ಕಾಜೆ, ಶಂಭು ಶರ್ಮ ವಿಟ್ಲ ಮತ್ತು 2024ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಬಿ. ಸೀತಾರಾಮ ತೋಳ್ಪಡಿತ್ತಾಯ ಧರ್ಮಸ್ಥಳ ಇವರನ್ನು ಸನ್ಮಾನಿಸಲಾಯಿತು. ಭಾಗವತ, ಯಕ್ಷಪ್ರಭಾ ಪತ್ರಿಕೆಯ ಸಂಪಾದಕರಾದ ದಿ. ಕುಬನೂರು ಶ್ರೀಧರ ರಾವ್ ಅವರಿಗೆ ಮರಣೋತ್ತರವಾಗಿ ನೀಡಲಾದ ಗೌರವವನ್ನು ಅವರ ಪುತ್ರ ಶ್ರೀಕಾಂತ ರಾವ್ ಉಜಿರೆ ಸ್ವೀಕರಿಸಿದರು.
ಕೃತಜ್ಞತೆ ಸಮರ್ಪಣೆ
ಚೌತಿ ತಾಳಮದ್ದಳೆಯನ್ನು ಸಂಘಟಿಸುವಲ್ಲಿ ಕಳೆದ ಕೆಲವು ವರ್ಷಗಳಿಂದ ಸಹಕಾರ ನೀಡುತ್ತಿರುವ ಭಾಗವತ ಬಿ. ವೆಂಕಟರಮಣ ರಾವ್ ಉಜಿರೆ ಮತ್ತು ಸ್ಮರಣ ಸಂಚಿಕೆಯನ್ನು ಮುದ್ರಣ ಮಾಡಿದ ಉಜಿರೆ ಮಂಜುಶ್ರೀ ಪ್ರಿಂಟರ್ಸ್ ವ್ಯವಸ್ಥಾಪಕರಾದ ಶೇಖರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಮನೆಯವರ ಗೌರವ ಸಮರ್ಪಣೆ: ಚೌತಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಅಪೂರ್ವ ಕಾರ್ಯಕ್ರಮವನ್ನು ಸಂಘಟಿಸಿದ ಕೆ.ಪುರಂದರ ರಾವ್ ಮತ್ತು ಶ್ರೀಮತಿ ಜಯಂತಿ ಪುರಂದರ ರಾವ್ ಅವರನ್ನು ಮನೆಯ ಸದಸ್ಯರೆಲ್ಲರೂ ಸೇರಿ ಪ್ರೀತಿಯ ದ್ಯೋತಕವಾಗಿ ಗೌರವಿಸಿದರು. ಕಲಾವಿದರ, ಕಲಾಭಿಮಾನಿಗಳ ಸಮ್ಮುಖದಲ್ಲಿ ಸುಮಾರು 80ಕ್ಕಿಂತಲೂ ಹೆಚ್ಚು ಕುಟುಂಬದ ಸದಸ್ಯರು ಸೇರಿದ ಈ ಸಂದರ್ಭವು ದೊಂಡೋಲೆ ಮನೆಯ ಚೌತಿಯ ಸಂಭ್ರಮದ ನಿರಂತರತೆಯನ್ನು ಕಾಪಾಡುವ ಭರವಸೆಯನ್ನು ನೀಡಿದ ಕ್ಷಣವಾಗಿತ್ತು.ಅಭಯ ಕಾರಂತ್ ಪ್ರಾರ್ಥನಾ ಗೀತೆ ಹಾಡಿದರು. ಟ್ರಸ್ಟ್ ಅಧ್ಯಕ್ಷ ಕೆ. ಪುರಂದರ ರಾವ್ ಸ್ವಾಗತಿಸಿ ರಾಜರಾಮ ಕಾರಂತ್ ವಂದಿಸಿದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಲಾಯಿಲ ಕರ್ನೋಡಿ ಶಾಲಾ ಶಿಕ್ಷಕಿ ಮಮತ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರಸಿದ್ಧ ಕಲಾವಿದರಿಂದ ಇಂದ್ರ ತಂತ್ರ- ವಾಮನ ಚರಿತ್ರೆ ತಾಳಮದ್ದಳೆ ಜರಗಿತು.
























