ಸಾರ್ವಜನಿಕ ಶಾಂತಿ ಕದಡುವ ಉದ್ದೇಶದಿಂದ ಕೊಲೆಯತ್ನದ ಕಥೆ ಕಟ್ಟಿದ್ದ ಆರೋಪಿ
ಬಂಟ್ವಾಳ: ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಜೂನ್ 11ರಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಸಜಿಪಮುನ್ನೂರು ನಿವಾಸಿ ಉಮರ್ ಫಾರೂಕ್ ಎಂಬಾತ ನೀಡಿದ ದೂರು ಸುಳ್ಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಜಿಪಮುನ್ನೂರು ಗ್ರಾಮದ ನಿವಾಸಿ ಉಮರ್ ಪಾರೂಕ್ (48) ಜೂನ್ 1 ರಂದು ಮುಂಜಾನೆ ಜೀಪಿನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ತನ್ನ ಮೇಲೆ ತಲವಾರು ಬೀಸಿ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬುದಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ದೂರು ಸುಳ್ಳು ಎಂದು ತಿಳಿದುಬಂದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2025 ಕಲಂ 109, 324(4) ಜೊತೆ 3(5) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿದಾಗ ಇದೊಂದು ಸುಳ್ಳು ಪ್ರಕರಣವೆಂದು ಸಾಬೀತಾಗಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಪಾರೂಕ್ ಸಾರ್ವಜನಿಕರನ್ನು ಗಲಭೆ ಉಂಟಾಗುವಂತೆ ಪ್ರಚೋದಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಯ ಭೀತಿಯನ್ನು ಸೃಷ್ಟಿಸಿರುವುದಲ್ಲದೆ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದನೆ ಮಾಡಿ ಸುಳ್ಳು ದೂರು ನೀಡಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025, ಕಲಂ 192, 353(1)(ಬಿ), 230(1), 248(ಎ) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಉಮ್ಮರ್ ಫಾರೂಕ್‌ನನ್ನು ದಸ್ತಗಿರಿ ಮಾಡಿದ ಪೊಲೀಸರು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೆ ಸೆಪ್ಟೆಂಬರ್ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
























