ನಸುಕಿನವರೆಗೂ ನಡೆದ ಮಹೇಶ್‌ ಶೆಟ್ಟಿ ತಿಮರೋಡಿ ಮನೆ ಶೋಧ

ಶೂಟಿಂಗ್‌ ಮಾಡಿಟ್ಟಿದ್ದ 25ಕ್ಕೂ ಹೆಚ್ಚು ವಿಡಿಯೋಗಳು ಎಸ್‌ಐಟಿ ವಶ

ಧರ್ಮಸ್ಥಳ : ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಶುರುವಾದ ಎಸ್‌ಐಟಿಯ ಶೋಧ ಕಾರ್ಯಾಚರಣೆ ತಡರಾತ್ರಿ ದಾಟಿ ನಸುಕಿನ 2.30ರವರೆಗೂ ಮುಂದುವರಿದಿದೆ. ವಿಡಿಯೋ ರೆಕಾರ್ಡಿಂಗ್, ಫೋನ್ ಮಾಹಿತಿ ಹಾಗೂ ಹಲವು ಮಹತ್ವದ ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಬುರುಡೆ ಗ್ಯಾಂಗ್ ಮಾಡಿದ ಷಡ್ಯಂತ್ರದ ಮಹತ್ವದ ಮಾಹಿತಿಗಳು ಎಸ್‌ಐಟಿಗೆ ಸಿಕ್ಕಿದೆ. ಮುಖ್ಯವಾಗಿ 25ಕ್ಕೂ ಅಧಿಕ ವಿಡಿಯೋಗಳು ಎಸ್‌ಐಟಿಗೆ ಸಿಕ್ಕಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ತಲೆಬುರುಡೆ ತಂದ ಚಿನ್ನಯ್ಯ ಸಿಕ್ಕಿಬಿದ್ದರೆ ಯಾವ ರೀತಿ ಬಿಂಬಿಸಬೇಕು, ಮುಂದಿನ ನಡೆ ಹೇಗಿರಬೇಕೆಂದು ಮೊದಲೇ ಪ್ಲಾನ್‌ ಮಾಡಿ ಇಡಲಾಗಿತ್ತು. ಆ ಸಂದರ್ಭಕ್ಕೆ ತಕ್ಕಂತೆ ಬಿಡುಗಡೆ ಮಾಡಲು ವಿಟಿಯೋಗಳನ್ನು ರೆಡಿ ಮಾಟಿ ಇಟ್ಟಿದ್ದರು ಎನ್ನಲಾಗಿದೆ.





















































 
 

ಬುರುಡೆ ಗ್ಯಾಂಗ್ 25ಕ್ಕೂ ಹೆಚ್ಚು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಅವುಗಳನ್ನು ಸಂದರ್ಶನ ಶೈಲಿಯಲ್ಲಿ ಹಾಗೂ ವಿಭಿನ್ನ ಮಾದರಿಯಲ್ಲಿ ಸಿದ್ಧಪಡಿಸಲಾಗಿತ್ತು. ಗ್ಯಾಂಗ್‌ಗೆ ಸೇರಿದ ಪ್ರತಿಯೊಬ್ಬರ ಚಟುವಟಿಕೆ, ಪ್ರಕರಣ ಬೆಳವಣಿಗೆ ಹಾಗೂ ಭವಿಷ್ಯದಲ್ಲಿ ಸಂಭವಿಸಬಹುದಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಯಾವ ವಿಡಿಯೋ ಬಿಡುಗಡೆ ಮಾಡಬೇಕು ಎಂಬುದರ ಕುರಿತು ಗ್ಯಾಂಗ್ ಯೋಜನೆ ರೂಪಿಸಿಕೊಂಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಚಿನ್ನಯ್ಯ ಬಂಧನವಾದರೆ ಯಾವ ವಿಡಿಯೋ ಬಿಡುಗಡೆ ಮಾಡಬೇಕು, ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ, ಚಿನ್ನಯ್ಯ ಮೃತಪಟ್ಟರೆ ಯಾವ ವಿಡಿಯೋ… ಈ ರೀತಿಯಾಗಿ ಇಂತಹ ಪ್ರತಿಯೊಂದು ಸಂದರ್ಭಕ್ಕೂ ಗ್ಯಾಂಗ್ ಪ್ರತ್ಯೇಕ ವಿಡಿಯೋ ತಯಾರಿಸಿಕೊಂಡಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಯುವತಿಯ ಅತ್ಯಾಚಾರ ಪ್ರಕರಣ ಮುನ್ನೆಲೆಗೆ ಬಂದರೆ ಅದಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲು ವಿಶೇಷ ವಿಡಿಯೋ ಸಿದ್ದಪಡಿಸಲಾಗಿತ್ತು. ಯಾರು ಯಾರ ಹೆಸರು ಬರುತ್ತದೆಯೋ ಆ ಸಂದರ್ಭದಲ್ಲಿ ಪ್ರತ್ಯೇಕ ವಿಡಿಯೋಗಳನ್ನು ಪ್ರಸಾರ ಮಾಡಲು ಸಂಚು ರೂಪಿಸಲಾಗಿತ್ತು.

ಸಂಚಿನ ಸೂತ್ರಧಾರ ಮಟ್ಟಣ್ಣವರ್‌

ಈ ಇಡೀ ಸಂಚಿನಲ್ಲಿ ಅನೇಕ ಮಂದಿ ಭಾಗಿಯಾಗಿದ್ದಾರೆ, ದಿಲ್ಲಿ, ತಮಿಳುನಾಡು ಮುಂತಾದೆಡೆ ಅವರ ಕಬಂಧ ಬಾಹುಗಳು ಹರಡಿಕೊಂಡಿವೆ. ಸಂಚನ್ನು ಧರ್ಮಸ್ಥಳದಲ್ಲಿ ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಗಿರೀಶ್‌ ಮಟ್ಟಣ್ಣವರ್‌ ಮೇಲಿತ್ತು ಎಂದೆನ್ನಲಾಗುತ್ತಿದೆ.

ಇದೇ ವೇಳೆ ತಿಮರೋಡಿ ಗ್ಯಾಂಗ್‌ನಲ್ಲೇ ಮಟ್ಟಣ್ಣವರ್‌ ವಿರುದ್ಧ ಅಸಹನೆ ಹೊಗೆಯಾಡಲಾರಂಭಿಸಿದೆ. ಮಟ್ಟಣ್ಣವರ್‌ ಬಂದ ಬಳಿಕ ಸೌಜನ್ಯಾ ಹೋರಾಟ ಹಳಿತಪ್ಪಿ ಈಗ ಬೀದಿಗೆ ಬೀಳುವಂತಾಗಿದೆ ಎಂದು ಅನೇಕರು ತಮ್ಮೊಳಗೆ ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಉಡುಪಿಯ ಓರ್ವ ತಿಮರೋಡಿ ಪಡೆಯ ವ್ಯಕ್ತಿ ಬೆಳ್ತಂಗಡಿ ಗ್ರಾಮಸ್ಥರೊಂದಿಗೆ ಈ ಕುರಿತಾಗಿ ಮಾತನಾಡಿದ ಆಡಿಯೋ ಕೂಡ ವೈರಲ್‌ ಆಗಿದೆ.

ಕೇಸ್‌ ಬೆಳ್ತಂಗಡಿಗೆ ವರ್ಗ

ಈ ನಡುವೆ ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಧಾರವಾಡದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಗಿರೀಶ್ ಮಟ್ಟಣ್ಣನವರ್​ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಯೂಟ್ಯೂಬ್​​ ಚಾನಲ್ ಒಂದರಲ್ಲಿ ಜೈನ ಧರ್ಮದ ವಿರುದ್ಧ ಮಟ್ಟಣ್ಣನವರ್ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಯೂಟ್ಯೂಬ್​​ ಚಾನಲ್ ಒಂದರಲ್ಲಿ ಮಾತನಾಡಿದ್ದ ಗಿರೀಶ್ ಮಟ್ಟಣ್ಣನವರ್, ಮದುವೆಯಾದ ಹೆಣ್ಣುಮಗಳು ಜೈನ ರಾಜರೊಂದಿಗೆ ಮೊದಲ ರಾತ್ರಿ ಕಳೆಯಬೇಕಿತ್ತು. ಏಕಾಶಿಲಾ ಮೂರ್ತಿ ನಿರ್ಮಾಣ ಮಾಡಿದ ಶಿಲ್ಪಿಗಳ ಕೈ ಕತ್ತರಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮಂಜುನಾಥ್​ ಎಂಬವರು ಧಾರವಾಡ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.​ ಗಿರೀಶ್ ಮಟ್ಟಣ್ಣನವರ್ ಮತ್ತು ಯೂಟ್ಯೂಬ್​ ಚಾನಲ್​ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

error: Content is protected !!
Scroll to Top