ಹೇಗೆಲ್ಲ ಮೋಸ ಮಾಡುತ್ತಾರೆ ಈ ತಾರೆಯರು ಗೊತ್ತಾ?
ನವದೆಹಲಿ: ಬಾಲಿವುಡ್‌ನ ಜನಪ್ರಿಯ ತಾರೆಯರಾದ ಶಾರುಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ದೂರು ದಾಖಲಾಗಿದೆ. ಉತ್ಪಾದನಾ ದೋಷಗಳನ್ನು ಹೊಂದಿರುವ ಹ್ಯುಂಡೈ ಕಾರು ಖರೀದಿಸಿದ್ದ ರಾಜಸ್ಥಾನದ ಭರತ್‌ಪುರದ ವ್ಯಕ್ತಿಯೊಬ್ಬರು ಆ ಕಾರಿನ ರಾಯಭಾರಿಗಳಾಗಿದ್ದ ಬಾಲಿವುಡ್ ನಟರಾದ ಶಾರುಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ರಾಜಸ್ಥಾನದ ಭರತ್‌ಪುರ ನಿವಾಸಿ ಕೀರ್ತಿ ಸಿಂಗ್ ದೂರು ದಾಖಲಿಸಿದವರು. ಹ್ಯುಂಡೈ ಕಾರನ್ನು ಖರೀದಿಸಿದಾಗಿನಿಂದಲೂ ಅದರಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿದೆ. ಈ ಕುರಿತು ಪದೇಪದೆ ದೂರು ನೀಡಿದರೂ ನನ್ನ ಸಮಸ್ಯೆಗಳನ್ನು ಕಾರು ಕಂಪನಿ ಪರಿಹರಿಸಿಲ್ಲ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಭಾರತೀಯ ಕಾನೂನಿನ ಪ್ರಕಾರ ದೋಷಪೂರಿತವಾಗಿದ್ದರೆ ಅಥವಾ ದಾರಿ ತಪ್ಪಿಸುವಂತಿದ್ದರೆ, ಅಂತಹ ಉತ್ಪನ್ನಗಳ ಪ್ರಚಾರ ರಾಯಭಾರಿಗಳ ವಿರುದ್ಧ ದೂರು ದಾಖಲಿಸಬಹುದು. ಹೀಗಾಗಿ ಶಾರುಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಎಪ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಗ್ರಾಹಕರ ರಕ್ಷಣಾ ಕಾಯ್ದೆ 2019ರ ಪ್ರಕಾರ, ಸುಳ್ಳು ಅನುಮೋದನೆ ಅಥವಾ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ಪಾಲ್ಗೊಂಡ ರಾಯಭಾರಿಗಳ ಮೇಲೆ ದಂಡ ವಿಧಿಸಲು ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ.
ಸಿನಿಮಾ ತಾರೆಯರು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದುದರಿಂದ, ನಾನು ಆ ಕಾರನ್ನು ಖರೀದಿಸಿದೆ ಎಂದು ಕೀರ್ತಿ ಸಿಂಗ್ ಹೇಳಿಕೊಂಡಿದ್ದಾರೆ. ಮೊದಲಿಗೆ ಈ ಪ್ರಕರಣವನ್ನು ಭರತ್‌ಪುರ 2ನೇ ಸಿಜೆಎಂ ನ್ಯಾಯಾಲಯದಲ್ಲಿ ಖಾಸಗಿ ದೂರನ್ನಾಗಿ ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಆಧರಿಸಿ ನ್ಯಾಯಾಲಯವು ಮಥುರಾ ಗೇಟ್ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಸೂಚನೆಯನ್ನಾಧರಿಸಿ ಪೊಲೀಸರು ವಂಚನೆ ಹಾಗೂ ಇನ್ನಿತರ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
























