ಕಾರ್ಕಳದಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ವ್ಯಕ್ತಿ
ಕಾರ್ಕಳ : ಕಾರ್ಕಳ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ನವೀನ್ ಪೂಜಾರಿ (50) ಎಂದು ಗುರುತಿಸಲಾಗಿದೆ.
ನವೀನ್ ಪೂಜಾರಿ ಕಾರ್ಕಳದಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಸ್ಥಳೀಯವಾಗಿ ಅವರು ಬಡ್ಡಿ ನವೀನ ಎಂದು ಪರಿಚಿತರಾಗಿದ್ದರು. ಬಹಳ ಸಮಯದಿಂದ ಕಾರ್ಕಳದಲ್ಲೇ ವಾಸವಾಗಿದ್ದರು. ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ ಎಂದು ತಿಳಿದುಬಂದಿದೆ. ಅವರು ವಾಸವಾಗಿದ್ದ ಬಾಲಾಜಿ ಆರ್ಕೇಡ್ ಅಪಾರ್ಟ್‌ಮೆಂಟ್‌ನ ರಸ್ತೆಯಲ್ಲೇ ಕೊಲೆ ಸಂಭವಿಸಿದೆ. ರಸ್ತೆಯಲ್ಲಿ ಒಂದು ಸ್ಕೂಟರ್ ಪತ್ತೆಯಾಗಿದೆ. ಕಾರ್ಕಳ ನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಕೊಲೆಯ ಉದ್ದೇಶ ಮತ್ತು ದುಷ್ಕರ್ಮಿಗಳ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಉಡುಪಿ ಎಸ್‌ಪಿ ಹರಿರಾಮ್ ಶಂಕರ್, ಎಎಸ್‌ಪಿ ಡಾ.ಪ್ರಿಯಂವದ ಮತ್ತಿತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
























