ಚಾಮರಾಜನಗರ: ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮಾತನಾಡಿದ್ದು, ನಾನು ಮತ್ತು ನನ್ನ ಗಂಡ ಯಾವುದೇ ಧರ್ಮಕ್ಕೂ ಮತಾಂತರ ಆಗಿಲ್ಲ. ಧರ್ಮಸ್ಥಳದಲ್ಲಿ ಶವ ಹೂಳಿರುವುದಕ್ಕೆ ಸಂಬಂಧಿಸಿದ ಹಾಗೆ ಅವರು ನನ್ನ ಬಳಿ ಏನನ್ನೂ ಹೇಳಿಲ್ಲ. ಅವರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಚೆನ್ನಯ್ಯ ತನ್ನ ಎರಡನೇ ಪತ್ನಿ ಮಲ್ಲಿಕಾ ಜೊತೆಗೆ ತಮಿಳುನಾಡಿನಲ್ಲಿ ವಾಸವಿದ್ದು, ಕಳೆದ ಎರಡೂವರೆ ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಹೋದವನು ಮತ್ತೆ ಬಂದಿರಲಿಲ್ಲ. ಅವರ ಅಣ್ಣ ಕ್ರೈಸ್ತ ಪಾದ್ರಿಯಾಗಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ಒಯ್ಯುವುದು, ಸಾಮಗ್ರಿ ತಂದು ಕೊಡುವ ಕೆಲಸವನ್ನು ಚೆನ್ನಯ್ಯ ಮಾಡುತ್ತಿದ್ದುದಾಗಿ ಆಕೆ ಮಾಹಿತಿ ನೀಡಿದ್ದಾರೆ.
ಹಾಗೆಯೇ ಧರ್ಮಸ್ಥಳದಲ್ಲಿ ಕೆಲಸ ಮಾಡುವ ಸಮಯದಲ್ಲಿ ಯಾವುದೇ ಸಾವಿನ ಸಂಗತಿಗಳನ್ನು ನನ್ನೊಂದಿಗೆ ಹಂಚಿಕೊಂಡಿಲ್ಲ. ನಾವು ಇಲ್ಲಿ ವಾಸಿಸುವುದು 11 ವರ್ಷ ವಾಯಿತು. ನಾನೂ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಿದ್ದೆ. ನಾನು ಗಂಡನನ್ನು ಭೇಟಿ ಮಾಡುವುದಕ್ಕೂ ಹೋಗುವುದಿಲ್ಲ. ಇಲ್ಲಿಗೂ SIT ಅಧಿಕಾರಿಗಳು ಬಂದು ವಿಚಾರಣೆ ಮಾಡಿದ್ದಾರೆ ಎಂದಿದ್ದಾರೆ.
























