ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ ದೌರ್ಜನ್ಯ ಎಸಗಿದ್ದೀರಿ ಎಂಬ ಹೇಳಿಕೆಗೆ ಟೀಕೆ
ಬೆಂಗಳೂರು: ಕರ್ನಾಟಕದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಂಬಿಕೆಯ ನೆಲೆಗಟ್ಟಿನಲ್ಲಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವು ನಾಯಕರು ಬಾನು ಮುಷ್ತಾಕ್ ಹಿಂದೂ ಧರ್ಮದ ನಂಬಿಕೆಯನ್ನು ಒಪ್ಪಿ ದಸರಾ ಉತ್ಸವ ಉದ್ಘಾಟಿಸುತ್ತಾರಾ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ತನ್ನ ಓಲೈಕೆಯ ಅಜೆಂಡಾದ ಭಾಗವಾಗಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ಹಿಂದೂ ಸಂಘಟನೆ ಮುಖಂಡರು ಈ ನೆಲೆಯಲ್ಲಿ ಆಕ್ಷೇಪ ಎತ್ತಿದ್ದಾರೆ. ಈ ವಿಚಾರ ಚರ್ಚೆಯಲ್ಲಿರುವಂತೆಯೇ ಬಾನು ಮುಷ್ತಾಕ್ ಅವರ ಹಳೆಯ ವಿಡಿಯೋ ತುಣುಕೊಂದು ಈಗ ಮತ್ತೆ ಮುನ್ನೆಲೆಗೆ ಬಂದಿದೆ. 2023ರ ಜನಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿರುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಸನಾತನ ಎಂಬ ಎಕ್ಸ್ ಖಾತೆಯಲ್ಲಿ ಬಾನು ಮುಷ್ತಾಕ್ ಅವರು ಮಾತನಾಡಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. 2023ರ ಜನ ಸಾಹಿತ್ಯ ಸಮ್ಮೇಳನವು ಬೆಂಗಳೂರಿನಲ್ಲಿ ನಡೆದಿತ್ತು. ಪುರುಷೋತ್ತಮ ಬಿಳೆಮಲೆ ಸೇರಿದಂತೆ ಹಲವು ಎಡಪಂಥೀಯ ಧೋರಣೆಯ ಸಾಹಿತಿಗಳು ಇದರಲ್ಲಿ ಭಾಗವಹಿಸಿದ್ದರು. ಅದರಲ್ಲಿ ಬಾನು ಮುಷ್ತಾಕ್ ಒಬ್ಬ ಅಲ್ಪಸಂಖ್ಯಾತ ಮಹಿಳೆಯಾಗಿ ಕನ್ನಡವನ್ನು ಭಾಷೆಯಾಗಿ ಬೆಳೆಸಲಿಕ್ಕೆ, ಮಾತನಾಡಲಿಕ್ಕೆ ನೀವು ಅವಕಾಶ ಕೊಡಲಿಲ್ಲ. ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡ್ಬಿಟ್ರಿ, ಕೆಂಪು ಹಳದಿ ಬಾವುಟಕ್ಕೆ ಅರಿಶಿನ ಕುಂಕುಮ ಹಚ್ಚಿಬಿಟ್ರಿ ಎಂದು ಹೇಳಿದ್ದಾರೆ.
ಕೆಂಪು ಹಳದಿ ಅರಿಶಿನ ಕುಂಕುಮ ಬಾವುಟ ಹಾಕಿ ಕೂರಿಸಿ ಬಿಟ್ರಿ. ನಾನು ಎಲ್ಲಿ ನಿಲ್ಲಬೇಕು. ಏನು ನೋಡಬೇಕು. ಹೇಗೆ ಇನ್ವಾಲ್ ಆಗಬೇಕು, ಎಲ್ಲಿ ನಿಲ್ಲಬೇಕು. ಹೇಗೆ ಬೆರೆಯಲಿ. ನನ್ನನ್ನು ಹೊರಗಟ್ಟುವ ಹುನ್ನಾರ ಇಂದಿನಿಂದ ಇಲ್ಲ ಹಿಂದಿನಿಂದಲೂ ಆಗುತ್ತಿದೆ. ಅದು ಇವತ್ತು ಪೂರ್ಣಗೊಳ್ಳುತ್ತಿದೆ ಅಷ್ಟೇ ಎಂದು ಹೇಳಿದ್ದಾರೆ.
ಕನ್ನಡವನ್ನು ಭುವನೇಶ್ವರಿಯನ್ನಾಗಿ ಮಾಡಿ, ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆಯನ್ನು ಮಾಡಿ, ಕನ್ನಡದ ಪರಿಷೆಯನ್ನು ಮಾಡಿ ಏನು ಮಾಡಿದಿರಿ. ನನ್ನನ್ನು ಹೊರಗಟ್ಟಲಿಕ್ಕೆ ಇಷ್ಟೊಂದು ಹುನ್ನಾರ ಬೇಕಿತ್ತ ನಿಮಗೆʼ? ಎಂದು ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಅವರು ಮಾತನಾಡಿರುವುದು ವೈರಲ್ ಆಗುತ್ತಿದೆ. ಈ ಭಾಷಣದ ವಿಡಿಯೋವನ್ನು ಸನಾತನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಕನ್ನಡವನ್ನು ಭುವನೇಶ್ವರಿಯಾಗಿ ಸ್ವೀಕರಿಸಲು ಸಿದ್ಧರಿಲ್ಲ ಇವರು. ಕನ್ನಡ ಉಳಿದಿರುವುದೇ ಹಿಂದೂಗಳಿಂದ ಇದನ್ನು ಘಂಟಾಘೋಷವಾಗಿ ಹೇಳುತ್ತೇವೆ ಎಂದು ಬರೆಯಲಾಗಿದೆ.
ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿ, ಕನ್ನಡ ಭುವನೇಶ್ವರಿಯನ್ನು ಸಹಿಸಲಾಗದವರು ಚಾಮುಂಡಿ ತಾಯಿಯ ವೈಭವಕ್ಕೆ ತಲೆಬಾಗಲು ಒಪ್ಪಿದ್ದಾದರೂ ಏಕೆ ಎಂದು ಕೇಳಿದ್ದಾರೆ.
























