ಇಂದು ಮತ್ತೆ ನಡೆಯಲಿದೆ ಯೂಟ್ಯೂಬರ್‌ ಸಮೀರ್‌ ವಿಚಾರಣೆ

ಪೊಲೀಸರ ಪ್ರಶ್ನೆಗಳ ಬಾಣದಿಂದ ಕಂಗಾಲಾದ ಸುಳ್ಳು ಸುದ್ದಿಕೋರ

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ರೇಪ್ ಮತ್ತು ಮರ್ಡರ್ ಆಗಿದೆ ಎಂದು ಎಐ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ್ದ ಯೂಟ್ಯೂಬರ್‌ ಮಹಮ್ಮದ್‌ ಸಮೀರ್ ಬೆಳ್ತಂಗಡಿ ಠಾಣೆಯಲ್ಲಿ ಭಾನುವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಿದ್ದ. ಅಧಿಕಾರಿಗಳು ಆತನನ್ನು ಸುಮಾರು 4.30 ತಾಸುಗಳ ಕಾಲ ತೀವ್ರ ವಿಚಾರಣೆ ನಡೆಸಿದ್ದಾರೆ. ಸೋಮವಾರ ಕೂಡ ಸಮೀರ್‌ ವಿಚಾರಣೆ ನಡೆಯಲಿದೆ. ಸೋಮವಾರ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಜೊತೆ ಬರಬೇಕೆಂದು ಪೊಲೀಸರು ಹೇಳಿದ್ದಾರೆ.

ಕಾಲ್ಪನಿಕ ವಿಡಿಯೋ ಮೂಲಕ ದೊಂಬಿ ಸೃಷ್ಟಿಯಲು ಯತ್ನಿಸಿದ್ದಾನೆ ಎಂದು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಎರಡೆರಡು ನೋಟಿಸ್ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ನಾಲ್ವರು ವಕೀಲರ ಜೊತೆ ಸಮೀರ್‌ ಹಾಜರಾಗಿದ್ದ. ಇನ್‌ಸ್ಪೆಕ್ಟರ್‌ ನಾಗೇಶ್ ಕದ್ರಿ ತೀವ್ರ ವಿಚಾರಣೆ ಮಾಡಿದ್ದಾರೆ. ಆರಂಭದಲ್ಲಿ ಜೋಶ್‌ನಲ್ಲಿ ಉತ್ತರಿಸಿದ್ದ ಸಮೀರ್ ನಂತರ ತಣ್ಣಗಾಗಿದ್ದಾನೆ ಎಂದು ತಿಳಿದುಬಂದಿದೆ.





















































 
 

ಯಾವ ಆಧಾರದ ಮೇಲೆ ವಿಡಿಯೋ ಮಾಡಿದೆ? ಈ ಎಐ ವಿಡಿಯೋ ಮಾಡಲು ನಿನಗೆ ಇದ್ದ ಮಾಹಿತಿ ಏನು? ದೊಂಬಿ ಗಲಭೆಗೆ ಪ್ರಚೋದನೆ ನೀಡುವಂತ ವಿಡಿಯೋ ಮಾಡಿದ್ದು ಯಾಕೆ? ಎಲ್ಲರೂ ಮಾತನಾಡಿಕೊಂಡು ಒಟ್ಟಿಗೆ ಸಂಚು ರೂಪಿಸಿದ್ದೀರಾ? ಹೋರಾಟದ ಹೆಸರಲ್ಲಿ ಯಾರ್ಯಾರು ತೆರೆಮರೆಯಲ್ಲಿ ಇದ್ದಾರೆ? ಈ ಎಲ್ಲಾ ಬೆಳವಣಿಗೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು? ಮಾಸ್ಕ್ ಮ್ಯಾನ್‍ಗೂ ನಿನಗೂ ಏನು ಸಂಬಂಧ? ಉಳಿದ 3 ಮಂದಿಗೂ ನಿನಗೂ ಯಾವಗಿನಿಂದ ಪರಿಚಯ? ಎಂಬಿತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ.

ಹತ್ತಾರು ಪ್ರಶ್ನೆ ಕೇಳಿದ ಪೊಲೀಸರು ಆತನಿಂದಲೇ ವಾಯ್ಸ್‌ ಓವರ್‌ ಕೊಡಲು ಹೇಳಿದರು. ವಿಡಿಯೋದ ಒಂದೇ ಸ್ಕ್ರಿಪ್ಟ್‌ನ್ನು ಮೂರು ಬಾರಿ ಓದಿಸಿ ಧ್ವನಿ ಸಂಗ್ರಹ ಮಾಡಿಕೊಂಡ ಪೊಲೀಸರು ಅದನ್ನ ಎಫ್ಎಸ್‌ಎಲ್‌ಗೆ ಕಳಿಸಲಿದ್ದಾರೆ. ಹೀಗೆ ಬೆಳಗಿನಿಂದ ಸಂಜೆವರೆಗೂ ವಿಚಾರಣೆ ನಡೆಸಿದ ಪೊಲೀಸರು ನಾಳೆ (ಆ.25) ಮತ್ತೆ ಬರಬೇಕು ಅಂತ ಹೇಳಿ ಸಮೀರ್‌ನನ್ನ ವಾಪಸ್‌ ಕಳಿಸಿದ್ದಾರೆ.

ಇಂದು ವಿಡಿಯೋ ಎಡಿಟಿಂಗ್‌ಗೆ ಬಳಸಿದ ಕಂಪ್ಯೂಟರ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಮತ್ತೆರಡು ಪ್ರಕರಣಗಳು ಸಮೀರ್ ಮೇಲಿದ್ದು, ಖಾಸಗಿ ವಾಹಿನಿ ವರದಿಗಾರ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರಶ್ನೆ ಕೇಳಿದ್ದಾರೆ. ಬೆನಕ ಆಸ್ಪತ್ರೆ ಬಳಿ ಗಲಾಟೆ ಕೇಸ್ ತನಿಖೆ ಬಾಕಿ ಇದೆ.

ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ ಶಿವತಾಂಡವ ಶುರುವಾಗುತ್ತೆ, ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರ ಚಿನ್ನಯ್ಯನಿಗೆ ʻಭೀಮ’ ಎಂದು ಹೆಸರಿಟ್ಟಿದ್ದೇ ಸಮೀರ್. ಅನನ್ಯಾ ಭಟ್ ಎನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಎಂಡೆಲ್ಲ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಎಂದೆಲ್ಲ ಆರೋಪ ಇದೆ. ಮುಂದಿನ ದಿನಗಳಲ್ಲಿ ಈ ಆರೋಪಗಳ ಕುರಿತು ಪೊಲೀಸರು ಆತನನ್ನು ವಿಚಾರಣೆ ನಡೆಸಲಿದ್ದಾರೆ.

error: Content is protected !!
Scroll to Top