ಡಿಕೆಶಿ ಹಾಡಿದ ಆರ್ಎಸ್ಎಸ್ ಗೀತೆಯಿಂದ ಕೈ ಪಡೆಯಲ್ಲಿ ಕಿಡಿ
ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಡಿದ ಆರ್ಎಸ್ಎಸ್ನ ಧ್ಯೇಯಗೀತೆ ನಮಸ್ತೆ ಸದಾ ವತ್ಸಲೇ… ಕಾಂಗ್ರೆಸ್ನೊಳಗೆ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿಯವರು ಡಿಕೆಶಿ ನಡೆಯನ್ನು ವ್ಯಂಗ್ಯವಾಗಿಯಾದರೂ ಸ್ವಾಗತಿಸಿದ್ದರೆ, ಸದಾ ಆರ್ಎಸ್ಎಸ್ನ್ನು ದ್ವೇಷಿಸುತ್ತಿರುವ ಕಾಂಗ್ರೆಸ್ನ ಕೆಲವು ನಾಯಕರಿಗೆ ಮಾತ್ರ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಆರ್ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆ ಚರ್ಚೆ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ನಮಸ್ತೇ ಸದಾ ವತ್ಸಲೇ… ಎಂದು ಆರ್ಎಸ್ಎಸ್ ಗೀತೆ ಹಾಡಿದ್ದಾರೆ. ಅದು ಸಾಂದರ್ಭಿಕವಾಗಿ ಬಿಜೆಪಿ ಟೀಕೆಗಳಿಗೆ ಶಿವಕುಮಾರ್ ನೀಡಿದ ಪ್ರತಿಕ್ರಿಯೆ ಆಗಿದ್ದರೂ ಈಗ ಅದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಡಿ.ಕೆ ಶಿವಕುಮಾರ್ ಅವರ ನಡೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿಡಿಮಿಡಿಗೊಂಡಿದ್ದಾರೆ. ಅವರು (ಡಿಕೆಶಿ) ಏನು ಬೇಕಾದರೂ ಮಾಡಬಹುದು ಎನ್ನುವ ಮೂಲಕ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ನ್ನು ದೂಷಿಸುವ ಮೂಲಕ ಡಿಕೆಶಿ ಮೇಲಿರುವ ತನ್ನ ಸಿಟ್ಟನ್ನು ತೀರಿಸಿಕೊಂಡಿದ್ದಾರೆ. ಆರ್ಎಸ್ಎಸ್ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂದು ಟ್ವಿಟ್ಟರ್ನಲ್ಲಿ ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ. ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿಪ್ರಜೆಯೂ ಆರ್ಎಸ್ಎಸ್ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂಬ ಪ್ರತಿಜ್ಞೆ ಕೈಗೊಳ್ಳಬೇಕು. ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ, ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ ಆರ್ಎಸ್ಎಸ್ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಏಕೆಂದರೆ ಆರ್ಎಸ್ಎಸ್ ಸಂವಿಧಾನಕ್ಕೆ ಶತ್ರು, ಆರ್ಎಸ್ಎಸ್ ಐಕ್ಯತೆಗೆ ಶತ್ರು, ಆರ್ಎಸ್ಎಸ್ ರಾಷ್ಟ್ರಧ್ವಜಕ್ಕೆ ಶತ್ರು, ಆರ್ಎಸ್ಎಸ್ ರಾಷ್ಟ್ರಗೀತೆಗೆ ಶತ್ರು, ಆರ್ಎಸ್ಎಸ್ ಏಕತೆಗೆ, ಸಾರ್ವಭೌಮತೆಗೆ ಶತ್ರು ಎಂದು ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ.
ಇನ್ನೋರ್ವ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಪಟ್ಟ ಸಿಗುವುದಾದರೆ ನಾವು ಕೂಡ ಆರ್ಎಸ್ಎಸ್ ಗೀತೆ ಹಾಡಲು ಸಿದ್ಧರಿದ್ದೇವೆ ಎನ್ನುವ ಮೂಲಕ ಡಿಕೆಶಿಯವರ ಕಾಲೆಳೆದಿದ್ದಾರೆ. ಡಿ.ಕೆ ಸಂಸ್ಕೃತ ಪಂಡಿತರು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರೆ ಆರ್ಎಸ್ಎಸ್ ಎಂಬುದು ಬಿಜೆಪಿಯ ಸಂಸ್ಥೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮತ್ತೊಂದೆಡೆ ಕೆಲವು ಕಾಂಗ್ರೆಸ್ ನಾಯಕರು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಇದಕ್ಕೆಲ್ಲ ವಿಶೇಷ ಅರ್ಥ ಕಟ್ಟಿಕೊಂಡು ಅನ್ಯಥಾ ಭಾವಿಸಬಾರದು ಎಂದಿದ್ದಾರೆ.
ಪ್ರತಿಪಕ್ಷ ಬಿಜೆಪಿ ಡಿ.ಕೆ ಶಿವಕುಮಾರ್ ನಡೆಯನ್ನು ಸ್ವಾಗತಿಸಿದ್ದು, ಈ ಬಗ್ಗೆ ಮಾತನಾಡಿರುವ ಶಾಸಕ ಅಶ್ವತ್ಥ್ ನಾರಾಯಣ್, ಡಿಕೆಶಿ ಪಕ್ಷಕ್ಕೆ ಆರ್ಎಸ್ಎಸ್ ಏನೆಂದು ಪಕ್ಷಕ್ಕೆ ತಿಳಿಸಿದಂತಾಗಿದೆ ಎಂದಿದ್ದಾರೆ.
























