ಮಂಗಳೂರು : ಕ್ರೀಡಾಪಟುಗಳ ಹಾಸ್ಟೆಲ್‌ನ ಅಕ್ಕಿಯಲ್ಲಿ ಹುಳು ಪತ್ತೆ

ಲೋಕಾಯುಕ್ತ ದಾಳಿಯಿಂದ ಬಯಲಾದ ಹಾಸ್ಟೆಲ್‌ನ ಅವ್ಯವಸ್ಥೆ

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ದ.ಕ. ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿ ಗೃಹಕ್ಕೆ ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್ ಹಾಗೂ ಪೊಲೀಸ್ ನಿರೀಕ್ಷಕಿಯರಾದ ಭಾರತಿ ಜಿ, ರವಿ ಪವಾರ್ ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿದಾಗ ಅನೇಕ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ.

ವಸತಿಗೃಹದ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಇರಲಿಲ್ಲ. ಧವಸ ಧಾನ್ಯಗಳ ಸ್ಟಾಕ್ ಇರಲಿಲ್ಲ. ಅಕ್ಕಿಯಲ್ಲಿ ಹುಳುಗಳು ಕಂಡುಬಂದಿವೆ. ಸ್ಟಾಕ್ ರಿಜಿಸ್ಟ್ರರ್ ಕೂಡ ಇರಲಿಲ್ಲ. ಅಡುಗೆಗೆ ಕಡಿಮೆ ಗುಣಮಟ್ಟದ ಹೆಚ್ಚು ಪ್ಯಾಟ್ ಇರುವ ಪಾಮೋಲಿನ್ ಅಡುಗೆ ಎಣ್ಣೆಯನ್ನು ಬಳಸುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.





















































 
 

ವಸತಿಗೃಹದಲ್ಲಿ 33 ಮಕ್ಕಳಿದ್ದು, ಅವರಿಗೆ ಪೌಷ್ಟಿಕ ಆಹಾರ ನೀಡುತ್ತಿರಲಿಲ್ಲ. ಊಟದ ಹಾಲ್‌ನಲ್ಲಿ ಹೆಚ್ಚಿನ ಸ್ಥಳವಕಾಶ ಇಲ್ಲದಿದ್ದರೂ ಎರಡು ವಸತಿಗೃಹಗಳ ಬಾಲಕರಿಗೆ ಮತ್ತು ಬಾಲಕಿಯರಿಗೆ ಒಂದೇ ಕಡೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸುವುದು ಕಂಡುಬಂದಿದೆ. ಸ್ಕಾಲರ್‌ಶಿಪ್ ಪಡೆದು ವಿದ್ಯಾಭ್ಯಾಸ ಮಾಡುವ ಹೆಚ್ಚಿನ ಮಕ್ಕಳು ಕ್ರೀಡಾಪಟುಗಳಾಗಿದ್ದು, ಸರ್ಕಾರದಿಂದ ಅನುದಾನ ಬರುತ್ತಿದ್ದರೂ ಸರಿಯಾದ ಆಹಾರದ ವ್ಯವಸ್ಥೆ ಮಾಡದಿರುವುದು ಪತ್ತೆಯಾಗಿದೆ.

ಸರ್ಕಾರದಿಂದ ಪ್ರತಿ ವರ್ಷ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲು ಅನುದಾನ ನೀಡುತ್ತಿದ್ದರೂ ಮಕ್ಕಳ ಪೋಷಕರೆ ತಮ್ಮ ಖರ್ಚಿನಲ್ಲಿ ಕ್ರೀಡಾ ಸಾಮಗ್ರಿಗಳನ್ನು ಮಕ್ಕಳಿಗೆ ಖರೀದಿಸಿ ಕೊಡಬೇಕಾಗುತ್ತದೆ. ಹಾಸ್ಟೆಲ್‌ನವರು ವಿತರಿಸಿರುವ ಶೂ ಕೂಡ ಕಳಪೆ ಗುಣಮಟ್ಟದಾಗಿದ್ದು ಕೆಲವೇ ವಾರದಲ್ಲಿ ಹಾಳಾಗಿದೆ ಎಂಬುದಾಗಿ ತಿಳಿದುಬಂದಿದೆ. ಕ್ರೀಡಾ ವಸತಿ ನಿಲಯದಲ್ಲಿ ಹೆಚ್ಚಿನ ಕೊಠಡಿಗಳು ಇದ್ದರೂ ಒಂದು ಕೊಠಡಿಯಲ್ಲಿ ಐವರು ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಿರುವುದು ಕಂಡು ಬಂದಿದೆ. ಮಕ್ಕಳನ್ನು ವಿವಿಧ ಕ್ರೀಡೆಗಳಿಗೆ ಕರೆದುಕೊಂಡು ಹೋಗಲು ಸರ್ಕಾರದಿಂದ ಅನುದಾನ ಬರುತ್ತಿದ್ದರೂ ಮಕ್ಕಳ ಪೋಷಕರೆ ಖರ್ಚನ್ನು ಭರಿಸಬೇಕಾಗುತ್ತದೆ. ಅನುದಾನ ದುರುಪಯೋಗವಾಗುವುದು ಕಂಡುಬಂದಿದೆ. ವಸತಿ ಗೃಹದಲ್ಲಿ ಆಹಾರದ ಕೊರತೆ, ಆಹಾರದ ಸರಬರಾಜಿನಲ್ಲಿ ಅವ್ಯವಹಾರ, ಟೆಂಡರ್ ಬದಲಾವಣೆ ಮಾಡದಿರುವುದು, ಸ್ಟಾಕ್ ಪರಿಶೀಲಿಸದಿರುವುದು ಕಂಡುಬಂದಿದೆ. ಈ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತರಿಗೆ ವರದಿ ನೀಡುವುದಾಗಿ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top