ಬಳ್ಳಾರಿಯಲ್ಲಿರುವ ಮನೆಗೆ ನೋಟಿಸ್ ಅಂಟಿಸಿ ಬಂದ ಪೊಲೀಸರು
ಧರ್ಮಸ್ಥಳ : ಧರ್ಮಸ್ಥಳ ಕೇತ್ರದ ಕುರಿತು ಅಪಪ್ರಚಾರ ಮಾಡಿರುವ ಕುರಿತು ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್ ಮೊಹಮ್ಮದ್ ಸಮೀರ್‌ನ ಬಳ್ಳಾರಿ ನಿವಾಸಕ್ಕೆ ಧರ್ಮಸ್ಥಳದ ಪೊಲೀಸರು ನೋಟಿಸ್ ಅಂಟಿಸಿದ್ದಾರೆ.
ಮನೆಗೆ ಬೀಗ ಜಡಿದಿದ್ದ ಹಿನ್ನೆಲೆ ಬಳ್ಳಾರಿಯ ಬಂಡಿಹಟ್ಟಿ ಏರಿಯಾದಲ್ಲಿರುವ ಸಮೀರ್ ಮನೆ ಗೋಡೆಗೆ ನೋಟಿಸ್ ಅಂಟಿಸಿದ್ದು, ಭಾನುವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಿನ್ನೆ ಸಂಜೆಯೇ ಧರ್ಮಸ್ಥಳ ಠಾಣೆ ಪೊಲೀಸರು ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಇದು ಈ ಪ್ರಕರಣದಲ್ಲಿ ಸಮೀರ್‌ಗೆ ನೀಡಿದ ಮೂರನೇ ನೋಟಿಸ್ ಆಗಿದೆ.
ಧರ್ಮಸ್ಥಳಕ್ಕೆ ಹೋಗಲು ತನಗೆ ಜೀವ ಭಯವಿದೆ, ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದು ಸಮೀರ್ ಹೇಳಿದ್ದ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ವಿಚಾರಣೆ ಎದುರಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇತ್ತೀಚೆಗಷ್ಟೇ ಬನ್ನೇರುಘಟ್ಟದಲ್ಲಿರುವ ಮನೆಯಲ್ಲೇ ಸಮೀರ್‌ನನ್ನು ವಶಕ್ಕೆ ಪಡೆಯಲು ತೆರಳಿದ್ದರು. ಸಮೀರ್ ನಿರೀಕ್ಷಣಾ ಜಾಮೀನು ಪಡೆದು ಬಚವಾಗಿದ್ದಾನೆ.
























