ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡಬಾರದೆಂದು ಆದೇಶ
ನವದೆಹಲಿ : ಬೀದಿನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಬಿಡುವಂತೆ ಇತ್ತೀಚೆಗೆ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತುಸು ಮಾರ್ಪಾಡು ಮಾಡಿ ರೇಬೀಸ್ ಇರುವ ನಾಯಿಗಳನ್ನು ಹೊರತುಪಡಿಸಿ ಎಲ್ಲ ಬೀದಿನಾಯಿಗಳನ್ನು ಸ್ಥಳಾಂತರಿಸುವಂತೆ ಆದೇಶಿಸಿದೆ. ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಲಾಗಿದೆ.
ಪ್ರತಿ ವಾರ್ಡ್ನಲ್ಲಿ ಆಹಾರ ನೀಡುವ ಪ್ರದೇಶಗಳನ್ನು ಗುರುತಿಸಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇತರ ಪ್ರದೇಶಗಳಲ್ಲಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ. ಸಾಮಾನ್ಯ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುವುದರಿಂದ ಅನಿಯಂತ್ರಿತ ಆಹಾರ ನೀಡುವುದನ್ನು ಅನುಮತಿಸಲಾಗುವುದಿಲ್ಲ ಎಂದು ಸುಪ್ರಿಂ ಕೋರ್ಟ್ ಆದೇಶದಲ್ಲಿ ಸ್ಟಷ್ಟವಾಗಿ ಹೇಳಿದೆ.
ಬೀದಿನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಬಾರದು. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ನಿಂದ ಎಲ್ಲ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಲು ಅನುಮತಿ ಇಲ್ಲ. ಬೀದಿನಾಯಿಗಳಿಗೆ ಆಹಾರ ನೀಡಲು ಮೀಸಲಾದ ಸ್ಥಳಗಳನ್ನು ರಚಿಸಬೇಕು. ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿರುವುದು ಕಂಡುಬಂದರೆ, ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ನಾಯಿಗಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಲು ಪ್ರಾಣಿಪ್ರಿಯರಿಗೆ ಅವಕಾಶ ನೀಡಿದ್ದರೂ ಮತ್ತೆ ನಾಯಿಗಳನ್ನು ಬೀದಿಗೆ ಬಿಡದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಪ್ರತಿಯೊಬ್ಬ ಅರ್ಜಿದಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಕ್ರಮವಾಗಿ 25,000 ಹಾಗೂ 2 ಲಕ್ಷ ರೂ.ಗಳನ್ನು ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಆದರೆ ರೇಬೀಸ್ ಅಥವಾ ಆಕ್ರಮಣಕಾರಿ ನಡವಳಿಕೆವುಳ್ಳ ನಾಯಿಗಳಿಗೆ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯದಲ್ಲಿ ಇಡಬೇಕು ಎಂದು ನಿರ್ದೇಶನ ನೀಡಿದೆ.
























