ಕ್ರಿಕೆಟ್ ಆಡುವಾಗ ಕೇರಳದ ವ್ಯಕ್ತಿಯನ್ನು ಗುಂಪುಕೂಡಿ ಥಳಿಸಿ ಕೊಂದ ಪ್ರಕರಣ
ಮಂಗಳೂರು: ಮಂಗಳೂರಿನ ಕುಡುಪುವಿನಲ್ಲಿ ಕಳೆದ ಏ.27ರಂದು ಕೇರಳ ಮೂಲದ ಆಶ್ರಫ್ ಎಂಬವರನ್ನು ಗುಂಡು ಹತ್ಯೆ ಮಾಡಿದ ಪ್ರಕರಣದ 10 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆರೋಪಿಗಳಾದ ಅನಿಲ್ ಕುಮಾರ್, ಸಾಯಿದೀಪ್, ಅನಿಲ್ ಕುಮಾರ್, ಯತಿರಾಜ್, ಮನೀಶ್ ಶೆಟ್ಟಿ, ಪ್ರದೀಪ್, ವಿವಿಯನ್ ಆಲ್ವರಿಸ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಏ.27ರರಂದು ಸಂಜೆ 5.30ರ ಸುಮಾರಿಗೆ ಮಂಗಳೂರಿನ ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿ ಅನುಮಾನಾಸ್ಪದ, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಮೃತದೇಹದ ಮರಣೋತ್ತರ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮೃತನ ಬೆನ್ನಿಗೆ ಬಲವಾದ ಹೊಡೆತ ಬಿದ್ದಿದೆ. ಗಂಭೀರ ಗಾಯಗೊಂಡ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿದೆ. ಹಿಂದೂ ಯುವಕರು ಮುಸ್ಲಿಂ ಯುವಕನನ್ನು ಗುಂಪು ಹತ್ಯೆ ನಡೆಸಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಸಿಪಿಐಎಂ, ಎಸ್‌ಡಿಪಿಐ ಆರೋಪ ಮಾಡಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ನೈಜ ವಿಚಾರ ಗೊತ್ತಾಗಿದೆ.
ಏ.27ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ಸಂದರ್ಭ ಆಶ್ರಫ್ ಎಂಬಾತ ಪಾಕಿಸ್ಥಾನ್ ಜಿಂದಾಬಾದ್ ಎಂದು ಕೂಗಿದ್ದಾನೆ ಎಂಬ ವಿಚಾರವಾಗಿ ಅಲ್ಲಿದ್ದ ಸಚಿನ್ ಎಂಬಾತನೊಂದಿಗೆ ವಾಗ್ವಾದ ನಡೆದಿತ್ತು. ಸಚಿನ್ ಆತನಿಗೆ ಥಳಿಸಿದ್ದು, ಬಳಿಕ ಅಲ್ಲಿದ್ದ 25ರಿಂದ 30 ಮಂದಿಯ ಗುಂಪು ಅಪರಿಚಿತ ವ್ಯಕ್ತಿಗೆ ಕೈಯಿಂದ ಮತ್ತು ದೊಣ್ಣೆಯಿಂದ ಹೊಡೆದು, ಯದ್ವಾತದ್ವಾ ತುಳಿದು ಹಲ್ಲೆ ನಡೆಸಿದ್ದಾರೆ. ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡು ವ್ಯಕ್ತಿ ಮೃತಪಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ದೀಪಕ್ ಕುಮಾರ್ ಎಂಬುವವರು 19 ಮಂದಿ ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಪೊಲೀಸರು 20 ಮಂದಿಯನ್ನು ಬಂಧಿಸಿದ್ದರು.
























