ಹಾರಿಹೋದ ಮನೆಗಳ ಛಾವಣಿ; ಅಪಾರ ನಾಶನಷ್ಟ
ಕಡಬ: ಕಡಬ ತಾಲೂಕಿನ ಸವಣೂರು ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಪ್ರಚಂಡ ವೇಗದ ಬಿರುಗಾಳಿ ಬೀಸಿ ಅಪಾರ ನಾಶನಷ್ಟ ಉಂಟಾಗಿದೆ. ಅಡಕೆ ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಹಲವು ಮನೆಗಳ ಹೆಂಚು, ಶೀಟ್ಗಳು ಹಾರಿಹೋಗಿವೆ.

ಸವಣೂರು ಮೆಸ್ಕಾಂ ಉಪವಿಭಾಗದ ಕೆಡೆಂಜಿ, ಅರೆಲ್ತಡಿ, ಕುದ್ಮನಮಜಲು, ಪಟ್ಟೆ, ಮಡಕೆ ಮತ್ತು ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮುಂಜಾನೆ 5 ಗಂಟೆ ವೇಳೆಗೆ ಬೀಸಿದ ಬಿರುಗಾಳಿ ವ್ಯಾಪಕವಾಗಿ ನಾಶ ಉಂಟುಮಾಡಿದೆ.
ಅರೇಲ್ತಡಿ ಕೊರಗಜ್ಜನ ಕಟ್ಟೆ, ದೈವಸ್ಥಾನದ ಆಸುಪಾಸು ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಅಪಾರ ಸಂಖ್ಯೆಯಲ್ಲಿ ಅಡಕೆ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.
























