ಎರಡು ವರ್ಷದಲ್ಲಿ ಪೋಕ್ಸೊ ಪ್ರಕರಣಗಳ ಸಂಖ್ಯೆ ಶೇ.26 ಏರಿಕೆ
ಬೆಂಗಳೂರು: ಕರ್ನಾಟಕದಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ ಸರ್ಕಾರವೇ ತಿಳಿಸಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಪೋಕ್ಸೊ ಪ್ರಕರಣಗಳ ಸಂಖ್ಯೆ ಶೇ.26ರಷ್ಟು ಹೆಚ್ಚಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ವಿಧಾನ ಪರಿಷತ್ತಿಗೆ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, 2022ರಲ್ಲಿ 3,209 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಅದು 2024ರ ವೇಳೆಗೆ 4,064ಕ್ಕೆ ಏರಿಕೆಯಾಗಿದೆ. 2025ರಲ್ಲಿ ಈವರೆಗೆ 2,544 ಪ್ರಕರಣಗಳು ದಾಖಲಾಗಿವೆ.
ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿದ್ದರೂ, ಅವುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳು ಖುಲಾಸೆಗೊಳ್ಳುತ್ತವೆ ಮತ್ತು ಶಿಕ್ಷೆಯ ಪ್ರಮಾಣ ಕಡಿಮೆ ಇರುತ್ತದೆ. 2022ರಲ್ಲಿ ದಾಖಲಾದ 3,209 ಪ್ರಕರಣಗಳಲ್ಲಿ, 1,562 ಪ್ರಕರಣಗಳು ಖುಲಾಸೆಗೊಂಡಿದ್ದವು. ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿತ್ತು. ಇನ್ನೂ 1,224 ಪ್ರಕರಣಗಳು ವಿಚಾರಣೆಯ ಹತದಲ್ಲಿವೆ.
ಪೋಕ್ಸೊ ಪ್ರಕರಣಗಳ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಮಕ್ಕಳಲ್ಲಿಯೂ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಜನಜಾಗೃತಿ ಹೆಚ್ಚುತ್ತಿರುವುದರಿಂದ ಪ್ರಕರಣಗಳನ್ನು ದಾಖಲಿಸುವ ಸಂಖ್ಯೆಯೂ ಹೆಚ್ಚಾಗಿರಬಹುದು ಎಂದು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣಗಳನ್ನು ಮುಂದುವರಿಸಿಕೊಂಡು ಹೋಗಲು ಪೋಷಕರು ಹಿಂಜರಿಯುವುದರಿಂದ ಶಿಕ್ಷೆ ಕಡಿಮೆಯಾಗುತ್ತಿರಬಹುದು. ಅನೇಕ ಪೋಷಕರು ಪ್ರಕರಣವನ್ನು ಹೆಚ್ಚು ಕಾಲ ಮುಂದುವರಿಸಲು ಅಥವಾ ಗುರುತು ಬಹಿರಂಗಪಡಿಸಲು ಬಯಸುವುದಿಲ್ಲ. ಅನೇಕರು ನ್ಯಾಯಾಲಯದ ಹೊರಗೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಮತ್ತು ರಾಜಿ ಮಾಡಿಕೊಳ್ಳಲು ಆಯ್ಕೆ ಮಾಡುತ್ತಾರೆ. ಆದ್ದರಿಂದ, ಶಿಕ್ಷೆಯ ಪ್ರಮಾಣ ಕಡಿಮೆಯಾಗಿರಬಹುದು.
























